ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶಮಿ ಪತ್ನಿ ಹಸೀನ್ ಜಹಾನ್ ತಮ್ಮ ಪತಿ ವಿರುದ್ಧ ಮತ್ತೆ ಹಲವು ಆರೋಪ ಮಾಡಿ, ಅವರನ್ನು ಬಂಧಿಸಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಸೀನ್ 2018ರಲ್ಲಿ ಮೊಹಮ್ಮದ್ ಶಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದರೆ ಶಮಿ ಈ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದರು.
ಸ್ಥಳೀಯ ನ್ಯಾಯಾಲಯವು ಮೊಹಮ್ಮದ್ ಶಮಿ ವಿರುದ್ಧದ ಬಂಧನ ವಾರಂಟ್‌ಗೆ ತಡೆಯಾಜ್ಞೆ ಹಿಂತೆಗೆದುಕೊಳ್ಳುವಂತೆ ಕೋರಿದ್ದ ಪತ್ನಿಯ ಮನವಿಯನ್ನು ವಜಾಗೊಳಿಸಿತ್ತು. ಈ ಬೆನ್ನಲ್ಲೇ ಸ್ಥಳೀಯ ಕೋರ್ಟ್ ಆದೇಶದ ವಿರುದ್ಧ ಪತ್ನಿ ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಸಹ ಸ್ಥಳೀಯ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ತಿರಸ್ಕರಿಸಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹಸೀನ್ ಇದೇ ಸಂದರ್ಭದಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಭಾರತೀಯ ಕ್ರಿಕೆಟಿಗನಿಗೆ ಹಲವು ವೇಶ್ಯೆಯರೊಂದಿಗೆ ವಿವಾಹೇತರ ಸಂಬಂಧವಿದೆ. ಅವರು ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಭಾರತ ತಂಡದೊಂದಗಿನ ಪ್ರವಾಸಗಳಲ್ಲಿ ಹಾಗೂ ಬಿಸಿಸಿಐ ಒದಗಿಸಿದ ಹೋಟೆಲ್ ಕೊಠಡಿಗಳಲ್ಲೂ ಅವರೂ ವೇಶ್ಯೆಯರೊಂದಿಗೆ ಕಳೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಮಿಗೆ ಈ ವರ್ಷದ ಆರಂಭದಲ್ಲಿ ಪತ್ನಿಗೆ ಮಾಸಿಕವಾಗಿ 1 ಲಕ್ಷದ 30 ಸಾವಿರ ರೂಪಾಯಿಯನ್ನು ನೀಡಬೇಕೆಂದು ಕೋಲ್ಕತ್ತಾ ಕೋರ್ಟ್ ಆದೇಶ ನೀಡಿತ್ತು. ಇದರಲ್ಲಿ ಹಸೀನ್ಗೆ 50 ಸಾವಿರ ಮತ್ತು ಮಗಳ ವಿದ್ಯಭ್ಯಾಸ ಮತ್ತು ನಿರ್ವಹಣೆಗೆ 80 ಸಾವಿರ ರೂಪಾಯಿ ಸೇರಿತ್ತು. ಆದರೆ ಹಸೀನ್ 2018 ರಲ್ಲಿ ತಿಂಗಳಿಗೆ 10 ಲಕ್ಷ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟರು. ಕೋಲ್ಕತ್ತಾ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ತಿಳಿಸಿದ್ದರು. ಆದರೆ ಇದೀಗ ಹೊಸ ಬಾಂಬ್ ಸಿಡಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.