ಎಂಟನೇ ಸೀಸನ್ನ ಪ್ರೋಕಬಡ್ಡಿ ಟೂರ್ನಿ ಆರಂಭಕ್ಕೆ ದಿನಗಣನೆ ನಡೆದಿದೆ. ಕ್ರಿಕೆಟ್ ಬಳಿಕ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕ್ರೀಡೆ ಎಂದರೆ ಅದು ಕಬಡ್ಡಿ. ಇದು ಭಾರತದ ಮಾಸ್ ಕ್ರೀಡೆ. ಕಬಡ್ಡಿ ಪಂದ್ಯ ನೋಡುವುದೇ ಒಂದು ರೋಚಕ ಅನುಭವ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ, ಬಿಪಿ ಹೆಚ್ಚಿಸುವ ಆಟ ಇದು. ಕಬಡ್ಡಿ ಆಟಗಾರರಲ್ಲಿ ಅಪ್ರತಿಮವಾದ ಫಿಟ್ನೆಸ್ ಇರಲೇಬೇಕು. ಜೊತೆಗೆ ಪಾಯಿಂಟ್ ಗಿಟ್ಟಿಸುವ ಕಲೆಗಳಲ್ಲೂ ಸಿದ್ಧಹಸ್ತರಿರಬೇಕು.
ಡುಬ್ಕಿ (Dubki): ಡಿಫೆಂಡರ್ಗಳು ಸರಪಳಿಯಂತೆ ಹಿಡಿಯಲು ಬಂದಾಗ ಒಬ್ಬ ರೇಡರ್ ತಪ್ಪಿಸಿಕೊಳ್ಳಲು ಉಪಯೋಗಿಸುವ ಪ್ರಮುಖ ಅಸ್ತ್ರ ಇದು. ಡಿಫೆಂಡರ್ಗಳ ಕೈ ಸರಪಳಿಯ ಬಲವಾಗಿ ಜಾರಿ ಹೋಗುವುದಕ್ಕೆ ಡುಬ್ಕಿ ಎನ್ನುತ್ತಾರೆ. ಡಿಫೆಂಡರ್ಗಳ ಮಧ್ಯೆ ಎಷ್ಟು ಅಂತರ ಇದೆ ಇತ್ಯಾದಿ ಅಂಶಗಳನ್ನ ಬಹಳ ಬೇಗ ಗ್ರಹಿಸಿ ಡುಬ್ಕಿ ಮಾಡಿದರೆ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯ. (Photo: Prokabaddi)
ಕಪ್ಪೆ ಜಿಗಿತ (Frog Jump): ಇದು ನೋಡಲು ಬಲು ಸೊಗಸು. ಆದರೆ, ಇದನ್ನ ಆಡುವುದು ಬಹಳ ಕಷ್ಟ. ಹಿಡಿಯಲು ಬರುವ ಡಿಫೆಂಡರ್ ಅಥವಾ ಡಿಫೆಂಡರ್ಸ್ ಬೆನ್ನ ಮೇಲಿಂದ ಜಿಗಿದು ಹೋಗುವುದೇ ಕಪ್ಪೆ ಜಿಗಿತ. ಸರಿಯಾದ ಸಮಯಕ್ಕೆ ಡಿಫೆಂಡರ್ ಬೆನ್ನ ಮೇಲೆ ಕೈ ಒತ್ತಿ ಛಂಗನೆ ಜಿಗಿಯಬೇಕು. ಇದು ಡಿಫೆಂಡರ್ಗಳು ಬಾಗಿ ಹಿಡಿಯಲು ಬರುವಾಗ ರೇಡರ್ ಫ್ರಾಗ್ ಜಂಪ್ ಮಾಡುವುದು ಸುಲಭವಾಗುತ್ತದೆ. ಫ್ರಾಗ್ ಜಂಪ್ ರೀತಿಯದ್ದೇ ಮತ್ತೊಂದು ಕಲೆ ಎಂದರೆ ಲಯನ್ ಜಂಪ್ (Lion Jump). ಇದರಲ್ಲಿ ರೇಡರ್ ತನ್ನ ಕಾಲಿನ ಬಲದಿಂದ ಮೇಲಕ್ಕೆ ಜಿಗಿಯುತ್ತಾನೆ. ಕಳೆದ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ರೋಹಿತ್ ಕುಮಾರ್ ಅವರು ಫ್ರಾಗ್ ಜಂಪ್ಗೆ ಖ್ಯಾತರಾಗಿದ್ದಾರೆ.
ಸ್ಕಾರ್ಪಿಯನ್ ಕಿಕ್ (Scorpion Kick): ಇದು ಬ್ಯಾಕ್ ಕಿಕ್ನ ಒಂದು ರೂಪಾಂತರಿ ಕಲೆ. ರೇಡರ್ ವಾಪಸ್ ಹೋಗುವ ಸುಳಿವು ನೀಡುವ ರೀತಿಯಲ್ಲಿ ಡಿಫೆಂಡರ್ಗಳಿಗೆ ಬೆನ್ನು ತೋರಿಸುತ್ತಾನೆ. ನಂತರ ಅಚ್ಚರಿ ರೀತಿಯಲ್ಲಿ ಕಾಲನ್ನ ವೇಗವಾಗಿ ಹಿಂದಕ್ಕೆ ಕಿಕ್ ಮಾಡುತ್ತಾನೆ. ಚೇಳಿನ ರೀತಿಯಲ್ಲಿ ಈ ನಡೆ ಕಾಣುವುದರಿಂದ ಸ್ಕಾರ್ಪಿಯನ್ ಕಿಕ್ ಎಂದು ಫೇಮಸ್ ಆಗಿದೆ. ಪ್ರೋಕಬಡ್ಡಿಯಲ್ಲಿ ನಾನು ಸಾಮಾನ್ಯವಾಗಿ ಇದನ್ನ ಕಾಣಬಹುದು. ದಕ್ಷಿಣ ಕೊರಿಯಾದ ಜಾನ್ ಕುನ್ ಲೀ ಅವರು ಸ್ಕಾರ್ಪಿಯನ್ ಕಿಕ್ಗೆ ಖ್ಯಾತರಾಗಿದ್ದಾರೆ. ಈ ವರ್ಷ ಇವರು ಪಟ್ನಾ ಪೈರೇಟ್ಸ್ ತಂಡದಲ್ಲಿದ್ದಾರೆ.
ಹ್ಯಾಂಡ್ ಟಚ್ (Hand Touch): ಕಬಡ್ಡಿಯಲ್ಲಿ ಒಬ್ಬ ರೇಡರ್ ಪಾಯಿಂಟ್ ಗಳಿಸಲು ಸಾಮಾನ್ಯವಾಗಿ ಅನುಸರಿಸುವ ತಂತ್ರ. ರೇಡರ್ ತನ್ನ ಕೈಯನ್ನ ಬಳಸಿ ಡಿಫೆಂಡರ್ ಅನ್ನು ಸ್ಪರ್ಧಿಸುವುದೇ ಹ್ಯಾಂಡ್ ಟಚ್. ರೇಡಿಂಗ್ ಮಾಡುವಾಗ ಡಿಫೆಂಡರ್ಗಳ ಪೊಸಿಶನ್ ಹೇಗಿದೆ ಎಂಬುದನ್ನ ಬಹಳ ಕ್ಷಿಪ್ರವಾಗಿ ಗ್ರಹಿಸಬೇಕು. ಅಥವಾ ತನ್ನ ಚಲನೆ ಮೂಲಕ ಡಿಫೆಂಡರ್ ಅನ್ನು ಗೊಂದಲಕ್ಕೆ ಕೆಡವಿ ಕೈಯಿಂದ ಅವರನ್ನ ಮುಟ್ಟಬಹುದು.