ಐಪಿಎಲ್ ಸೀಸನ್ ಆಗಮನಕ್ಕೆ ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಸೀಸನ್ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ 4 ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. 16ನೇ ಆವೃತ್ತಿಯಲ್ಲಿ 10 ತಂಡಗಳು ಐಪಿಎಲ್ ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 10 ತಂಡಗಳನ್ನು ಮುನ್ನಡೆಸುವ ನಾಯಕರ ಬಗ್ಗೆ ತಿಳಿದುಕೊಳ್ಳೋಣ.
ಕೋಲ್ಕತ್ತಾ ನೈಟ್ ರೈಡರ್ಸ್ - ನಿತೀಶ್ ರಾಣಾ: ಶ್ರೇಯಸ್ ಅಯ್ಯರ್ ಗಾಯದ ಕಾರಣದಿಂದ ಋತುವಿನ ಬಹುತೇಕ ಪಂದ್ಯಗಳನ್ನು ಕಳೆದುಕೊಳ್ಳುವುದು ಖಚಿತವಾದ ಕಾರಣ, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರನ್ನು ತಂಡದ ಹಂಗಾಮಿ ನಾಯಕನನ್ನಾಗಿ ಘೋಷಿಸಿದೆ. ರಾಣಾ ಐಪಿಎಲ್ ತಂಡವೊಂದರ ಜವಾಬ್ದಾರಿ ವಹಿಸಿಕೊಂಡಿರುವುದು ಇದೇ ಮೊದಲು. ರಾಣಾ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ಟಿ20 ಐಗಳಲ್ಲಿ ಎಂಟು ಗೆಲುವುಗಳು ಮತ್ತು ನಾಲ್ಕು ಸೋಲುಗಳಿಗೆ ಡೆಲ್ಲಿಯನ್ನು ಮುನ್ನಡೆಸಿದ್ದಾರೆ.