ಈ ವರ್ಷದ ಐಪಿಎಲ್‌ನಲ್ಲಿ ಮುಂಬೈ ತಂಡೆ ಅರ್ಜುನ್ ತೆಂಡೂಲ್ಕರ್ ಅವರನ್ನು 30 ಲಕ್ಷಕ್ಕೆ ಖರೀದಿಸಿತ್ತು. ಆದರೆ, ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ಅರ್ಜುನ್ ತೆಂಡೂಲ್ಕರ್‌ಗೆ ಮುಂಬೈ ಇಂಡಿಯನ್ಸ್ ನೀಡಲಿಲ್ಲ. ಮುಂಬೈ ಪರ ಸೋಕಿನ್, ಕುಮಾರ್ ಕಾರ್ತಿಕೇಯ ಸಿಂಗ್, ಸಂಜಯ್ ಯಾದವ್ ಮತ್ತು ಮಾರ್ಕಂಡೆ ಅವರಂತಹ ಆಟಗಾರರು ಪದಾರ್ಪಣೆ ಮಾಡಿದರೂ ಅರ್ಜುನ್ ಸ್ಥಾನ ಪಡೆಯಲಿಲ್ಲ.
ಅರ್ಜುನ್ ಕಳೆದ 2 ವರ್ಷಗಳಿಂದ ಮುಂಬೈ ಇಂಡಿಯನ್ಸ್‌ನಲ್ಲಿದ್ದಾರೆ, ಆದರೆ ಇನ್ನೂ ಐಪಿಎಲ್ ಚೊಚ್ಚಲ ಪ್ರವೇಶಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ ಮುಂಬೈ ತಂಡದ ಪ್ರದರ್ಶನ ನಿರಾಶಾದಾಯಕವಾಗಿದ್ದು, ಪ್ಲೇ-ಆಫ್‌ನಿಂದ ಹೊರಬಂದ ನಂತರ ಯುವ ಆಟಗಾರರಿಗೆ ಅವಕಾಶ ನೀಡಲಾಗುವುದು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು. ಆದರೆ ರೋಹಿತ್ ಘೋಷಣೆಯ ನಂತರ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಮುಂಬೈ ಅರ್ಜುನ್ ಅವರನ್ನು ತಂಡದ ಪ್ಲೇಯಿಂಗ್ 11 ನಲ್ಲಿ ಅಯ್ಕೆ ಆಗಲಿಲ್ಲ.
ಅರ್ಜುನ್ ತೆಂಡೂಲ್ಕರ್ ಗೆ ಅವಕಾಶ ನೀಡದಿದ್ದಕ್ಕೆ ಹಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಮುಂಬೈನ ಮೆಂಟರ್, ಅರ್ಜುನ್ ತಂದೆ ಸಚಿನ್ ತೆಂಡೂಲ್ಕರ್ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ. ‘ತಂಡದ ಆಯ್ಕೆಯಲ್ಲಿ ನಾನು ಎಂದಿಗೂ ಭಾಗವಹಿಸುವುದಿಲ್ಲ. ಕೇವಲ ನಾನು ಆಟಗಾರರಿಗೆ ಸಲಹೆ ಮಾತ್ರ ನೀಡುತ್ತೇನೆ ಎಂದು ಸಚಿನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅರ್ಜುನ್ ತೆಂಡೂಲ್ಕರ್ ಗೆ ಮತ್ತೊಂದು ಆಘಾತ ಎದುರಾಗಿದೆ. ಜೂನ್‌ನಲ್ಲಿ ನಡೆಯಲಿರುವ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗಾಗಿ ಮುಂಬೈ ತಂಡದಿಂದ ಅರ್ಜುನ್ ಅವರನ್ನು ಕೈಬಿಡಲಾಗಿದೆ. ವಾಸ್ತವವಾಗಿ, ಫೆಬ್ರವರಿಯಲ್ಲಿ ರಣಜಿ ಟ್ರೋಫಿ ಲೀಗ್ ಪಂದ್ಯಗಳಿಗಾಗಿ ಮುಂಬೈ ರಣಜಿ ಟ್ರೋಫಿ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಹೆಸರಿಸಲಾಯಿತು. ಆದರೆ, ಇತ್ತೀಚೆಗೆ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅರ್ಜುನ್‌ಗೆ ಸಾಧ್ಯವಾಗಲಿಲ್ಲ.