ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇಂದು (ಮಾರ್ಚ್ 12) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಕ್ಕೆ ಕಾಲಿಟ್ಟ ತಕ್ಷಣ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ವಿಶೇಷ ಸಾಧನೆ ದಾಖಲಿಸಲಿದ್ದಾರೆ. ಇವರಲ್ಲದೆ, ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಸಹ ವಿಭಿನ್ನ ದಾಖಲೆ ಮಾಡುವ ಸನಿಹದಲ್ಲಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಎಂಟ್ರಿ ಕೊಟ್ಟ ಕೂಡಲೇ ವಿಶೇಷ ಸಾಧನೆ ಮಾಡಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಗಳಲ್ಲಿ 400 ಪಂದ್ಯಗಳನ್ನು ಪೂರ್ಣಗೊಳಿಸಲಿದ್ದು, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಂತಹ ದಿಗ್ಗಜರ ಪಟ್ಟಿಗೆ ಸೇರಲಿದ್ದಾರೆ. 400 ಅಥವಾ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ 9ನೇ ಕ್ರಿಕೆಟಿಗನಾಗಲಿದ್ದಾರೆ. ರೋಹಿತ್ ಇದುವರೆಗೆ 44 ಟೆಸ್ಟ್, 230 ODI ಮತ್ತು 125 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಕಳೆದ ಪಂದ್ಯದ ಹೀರೋ ಆಗಿದ್ದ ರವೀಂದ್ರ ಜಡೇಜಾ ಅವರ ಕಣ್ಣು ಕೂಡ ಮತ್ತೊಂದು ವಿಶೇಷ ಸಾಧನೆಯತ್ತ ನೆಟ್ಟಿದೆ. ಜಡೇಜಾ ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 241 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ 250 ವಿಕೆಟ್‌ಗಳ ಸನಿಹದಲ್ಲಿರುವ ಅವರು ಕಳೆದ ಪಂದ್ಯದಂತೆ ಪ್ರದರ್ಶನ ನೀಡಿದರೂ ಆ ಸಾಧನೆಯನ್ನು ತಮ್ಮ ಹೆಸರಲ್ಲಿಯೇ ಮಾಡುತ್ತಾರೆ. ಮೊಹಾಲಿ ಟೆಸ್ಟ್‌ನಲ್ಲಿ ಅವರು ಅಜೇಯ 175 ರನ್ ಗಳಿಸಿ 9 ವಿಕೆಟ್ ಪಡೆದಿದ್ದರು.
ಭಾರತದ ಪರ ಕೇವಲ 8 ಆಟಗಾರರು ಮಾತ್ರ 400ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ (664), ಮಹೇಂದ್ರ ಸಿಂಗ್ ಧೋನಿ (538), ರಾಹುಲ್ ದ್ರಾವಿಡ್ (509), ವಿರಾಟ್ ಕೊಹ್ಲಿ (457), ಮೊಹಮ್ಮದ್ ಅಜರುದ್ದೀನ್ (433), ಸೌರವ್ ಗಂಗೂಲಿ (424), ಅನಿಲ್ ಕುಂಬ್ಳೆ (403) ಮತ್ತು ಯುವರಾಜ್ ಸಿಂಗ್ (402), ರೋಹಿತ್ ಸಹ ಇಂದಿನ ಪಂದ್ಯದ ಮೂಲಕ ಈ ಸಾಧನೆಗೆ ಭಾಜನರಾಗಲಿದ್ದಾರೆ.