ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರದರ್ಶನ ನೀಡಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಪುಣೆಯಲ್ಲಿ ನಡೆದ 3 ಪಂದ್ಯಗಳ ಸರಣಿಯ ಎರಡನೇ T20 ಪಂದ್ಯದಲ್ಲಿ ಭಾರತ 16 ರನ್ಗಳಿಂದ ಶ್ರೀಲಂಕಾ ವಿರುದ್ಧ (IND vs SL) ಸೋಲನ್ನಪ್ಪಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಅಕ್ಷರ್ ಪಟೇಲ್ ಅವರ ಆಲ್ ರೌಂಡ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತದ ಇನ್ನಿಂಗ್ಸ್ನ 14ನೇ ಓವರ್ನಲ್ಲಿ ಅಕ್ಷರ್ ಪಟೇಲ್ ಅವರು ವನಿಂದು ಹಸರನ್ ಅವರ ಬೌಲಿಂಗ್ನಲ್ಲಿ ಸತತ ಮೂರು ಸಿಕ್ಸರ್ಗಳನ್ನು ಬಾರಿಸಿದರು. ಈ ಓವರ್ನ ಮೊದಲ 3 ಎಸೆತಗಳಲ್ಲಿ ಅಕ್ಷರ್ ಸಿಕ್ಸರ್ ಬಾರಿಸಿದರು. ನಿರ್ಣಾಯಕ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಆಲ್ ರೌಂಡರ್ ಉತ್ತಮ ಜೊತೆಯಾಟವನ್ನು ರೂಪಿಸಿದರು. ಅಕ್ಷರ್ ಮತ್ತು ಸೂರ್ಯ ಏಳನೇ ವಿಕೆಟ್ಗೆ 91 ರನ್ಗಳ ಜೊತೆಯಾಟವಾಡಿದರು.
28 ವರ್ಷದ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. T20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿವೇಗದ ಅರ್ಧಶತಕ ಗಳಿಸಿದ ಐದನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಅಕ್ಷರ್ ಪಾತ್ರರಾದರು. 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ನಲ್ಲಿ 12 ಎಸೆತಗಳಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಅನುಭವಿ ಆಲ್ರೌಂಡರ್ ಯುವರಾಜ್ ಸಿಂಗ್ ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.