ವೇಗವಾಗಿ 74 ಶತಕ: ಕೊಹ್ಲಿ ಈಗ 74 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ನಂತರ ಹೆಚ್ಚು ಶತಕ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಕೊಹ್ಲಿ. ತೆಂಡೂಲ್ಕರ್ 74 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಲು 556 ಇನ್ನಿಂಗ್ಸ್ ತೆಗೆದುಕೊಂಡರು. ಕೊಹ್ಲಿ 543 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 27 ಟೆಸ್ಟ್ ಶತಕ, 46 ಏಕದಿನ ಶತಕ ಮತ್ತು ಟಿ20ಯಲ್ಲಿ ಒಂದು ಶತಕ ಸೇರಿದೆ.
ಏಕದಿನದಲ್ಲಿ ಅತಿ ವೇಗದ 150 ರನ್: ಭಾನುವಾರ ಶ್ರೀಲಂಕಾ ಬೌಲರ್ಗಳ ಮೇಲೆ ಕೊಹ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.100ರಿಂದ 150 ರನ್ ಗಳಿಸಲು ಅವರು ಕೇವಲ 21 ಎಸೆತಗಳನ್ನು ಆಡಿದರು. ಅವರು 106 ಎಸೆತಗಳಲ್ಲಿ 150 ರನ್ ಗಳಿಸಿದರು. ಭಾರತದ ನೆಲದಲ್ಲಿ ವೇಗದ ODI 150 ರನ್ ಗಳಿಸಿ ದಾಖಲೆ ಬರೆದಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾದ ಆಟಗಾರ ಜಾರ್ಜ್ ಬೈಲಿ ಭಾರತದ ವಿರುದ್ಧ 109 ಎಸೆತಗಳಲ್ಲಿ 150 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.
ಏಕದಿನದಲ್ಲಿ ಅತಿ ಹೆಚ್ಚು ಅಜೇಯ ಶತಕ: ಶ್ರೀಲಂಕಾದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಅತಿ ಹೆಚ್ಚು ಅಜೇಯ ಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ 15 ಬಾರಿ ಶತಕ ಗಳಿಸಿದಾಗ ಅಜೇಯರಾಗಿ ಉಳಿದಿದ್ದರು. ಆದರೆ ಇದೀಗ ಕೊಹ್ಲಿ ಸಚಿನ್ ಅವರನ್ನು ಮೀರಿಸಿದ್ದಾರೆ. ಅವರು 16 ಬಾರಿ ಶತಕದ ಬಳಿಕ ಅಜೇಯರಾಗಿ ಉಳಿದಿದ್ದಾರೆ.
ಒಂದೇ ತಂಡದ ವಿರುದ್ಧ ಹೆಚ್ಚು ಶತಕ: ಕೊಹ್ಲಿ ಭಾನುವಾರ ಶ್ರೀಲಂಕಾ ವಿರುದ್ಧ 50ನೇ ಏಕದಿನ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಕೊಹ್ಲಿ ಗಳಿಸಿದ ಶತಕ ಶ್ರೀಲಂಕಾ ವಿರುದ್ಧ ಒಟ್ಟಾರೆ 10ನೇ ಶತಕವಾಗಿದೆ. ಒಂದೇ ತಂಡದ ವಿರುದ್ಧ 10 ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಲ್ಲದೇ ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಧೋನಿ ನಂತರ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.