ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಜೊತೆಗೆ 132 ರನ್‌ಗಳೊಂದಿಗೆ ಜಯ ಸಾಧಿಸಿದೆ. ಆಸೀಸ್ ತಂಡ ತನ್ನ ಎರಡನೇ ಇನಿಂಗ್ಸ್ನಲ್ಲಿ ಕೇವಲ 91 ರನ್ಗಳಿಗೆ ಆಲೌಟ್ ಆಗಿತ್ತು. ಅಶ್ವಿನ್ ಸ್ಪಿನ್ಗೆ ಮೋಡಿಗೆ ಆಸೀಸ್ ಬೆಚ್ಚಿ ಬಿದ್ದಿತ್ತು.
ಅನುಭವಿ ಸ್ಪಿನ್ನರ್ ಅಶ್ವಿನ್ ಅವರ ಕೈಚಳಕ ಆಸ್ಟ್ರೇಲಿಯಾ ಸೋಲಿಗೆ ಕಾರಣವಾಗಿತ್ತು. ಆಸೀಸ್ ಬ್ಯಾಟರ್ಗಳಲ್ಲಿ ಸ್ಮಿತ್ ಮಾತ್ರ 25 ರನ್ ಗಳಿಸಿ ಪರವಾಗಿಲ್ಲ ಎನಿಸಿಕೊಂಡಿದ್ದರು. ಉಳಿದಂತೆ ಎಲ್ಲಾ ಬ್ಯಾಟರ್‌ಗಳು 20 ರನ್ಗಳಿಗಿಂತ ಹೆಚ್ಚಿನ ಮೊತ್ತ ದಾಟಿಲ್ಲ. ಆರಂಭಿಕ ಡೇವಿಡ್ ವಾರ್ನರ್ 10 ರನ್, ಲಾಬುಶೇನ್ 17 ರನ್, ಅಲೆಕ್ಸ್ ಕ್ಯಾರಿ 10 ರನ್ ಗಳಿಸಿದ್ದರು. ಉಳಿದ ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು.
ಇನ್ನು, ಟೀಂ ಇಂಡಿಯಾ ಸ್ಪಿನ್ ಬೌಲರ್ಗಳಾದ ಅಶ್ವಿನ್, ಜಡೇಜಾ ಸ್ಪರ್ಧೆಗೆ ಬಿದ್ದಂತೆ ಆಸ್ಟ್ರೇಲಿಯಾ ಆಟಗಾರರ ವಿಕೆಟ್ ಪಡೆದುಕೊಂಡಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ 5 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಇತ್ತ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 5 ವಿಕೆಟ್ ಗಳಿಸಿದ್ದಾರೆ. ಎರಡು ಇನ್ನಿಂಗ್ಸ್ಗಳಲ್ಲಿ ಅಶ್ವಿನ್ 8 ವಿಕೆಟ್, ಜಡೇಜಾ 7 ವಿಕೆಟ್ ಗಳಿಸಿದ್ದಾರೆ.