ಸದ್ಯ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಯಾರಿಯಲ್ಲಿ ನಿರತವಾಗಿದೆ. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆದರೆ, ಇದಕ್ಕೂ ಮುನ್ನ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯದ ಕಾರಣ ದೀರ್ಘಕಾಲದಿಂದ ಹೊರಗುಳಿದಿದ್ದಾರೆ.
ಇದೀಗ ಮತ್ತೋರ್ವ ಆಲ್‌ರೌಂಡರ್ ಗಾಯಗೊಂಡಿರುವುದು ಭಾರತದ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಪ್ರಕಟಿಸಲಾದ 15 ಸದಸ್ಯರ ತಂಡದಲ್ಲಿ ಒಬ್ಬ ವೇಗದ ಬೌಲರ್ ಆಲ್‌ರೌಂಡರ್ ಮಾತ್ರ ಸ್ಥಾನ ಪಡೆದಿದ್ದಾರೆ. ಆದರೆ ಶಾರ್ದೂಲ್ ಠಾಕೂರ್ ಕೂಡ ಗಾಯಗೊಂಡಿದ್ದಾರೆ. ಗಾಯದ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ ಪರ 3 ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ, ನಾಲ್ಕನೇ ಪಂದ್ಯದಲ್ಲಿ, ಅವರು ಕೇವಲ ಬ್ಯಾಟಿಂಗ್ ಮಾಡಿದ್ದಾರೆ.
ಶಾರ್ದೂಲ್ ಆಸ್ಟ್ರೇಲಿಯಾದಿಂದ ಇಂಗ್ಲೆಂಡ್ ವರೆಗೆ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಫಿಟ್ನೆಸ್ ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. 31 ವರ್ಷ ವಯಸ್ಸಿನ ಶಾರ್ದೂಲ್ ಠಾಕೂರ್ 8 ಟೆಸ್ಟ್‌ಗಳಲ್ಲಿ 24 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. 61 ರನ್‌ಗಳಿಗೆ 7 ವಿಕೆಟ್‌ಗಳು ಅತ್ಯುತ್ತಮವಾಗಿದೆ. ಅದೇ ವೇಳೆ 3 ಅರ್ಧಶತಕಗಳ ನೆರವಿನಿಂದ 254 ರನ್ ಕೂಡ ದಾಖಲಾಗಿದೆ.