ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಮದುವೆಯಾದ ಸಂಗತಿ ಎಲ್ಲಿರಿಗೂ ತಿಳಿದಿದೆ. ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಪಾಂಡ್ಯ ಮತ್ತೊಮ್ಮೆ ಮದುವೆಯಾಗಿದ್ದಾರೆ. ಪ್ರೇಮಿಗಳ ದಿನದಂದು ರಾಜಸ್ಥಾನದ ಉದಯಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆಯಾಗಿದ್ದ ಈ ಜೋಡಿ, ಸದ್ಯ ಹಿಂದೂ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ನಡೆಸಲಾಗಿದ್ದು, ಪಾಂಡ್ಯ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದು, ನತಾಶಾ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಫೋಟೋಗಳಲ್ಲಿ ದಂಪತಿ ಕೈ ಕೈ ಹಿಡಿದು ಸಪ್ತಪದಿ ಕೂಡ ತುಳಿದಿದ್ದಾರೆ. ಇದಕ್ಕೂ ಮುನ್ನ ಒಬ್ಬರಿಗೊಬ್ಬರು ಹಾರ ಕೂಡ ಬದಲಿಸಿಕೊಂಡಿದ್ದಾರೆ. ನತಾಶಾ ಹಣೆಗೆ ಕುಂಕುಮವಿಟ್ಟು ಪತ್ನಿಯಾಗಿ ಪಾಂಡ್ಯ ಸ್ವೀಕಾರ ಮಾಡಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಬಹುದು. ಇನ್ನು ಮುಹೂರ್ತದ ಸಮಯದಲ್ಲಿ ನತಾಶಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಲಿವ್ಇನ್ ರಿಲೇಶನ್ನಲ್ಲಿದ್ದ ಸಮಯದಲ್ಲಿ ನತಾಶಾ ಗರ್ಭಿಣಿಯಾಗಿದ್ದ ಕಾರಣ, ಕುಟುಂಬ ಸದಸ್ಯರು ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸಿದ್ದರು. ಇಬ್ಬರಿಗೂ 2020ರ ಜುಲೈನಲ್ಲಿ ಗಂಡು ಮಗು ಆಗಿತ್ತು. ಆದರೆ ಆ ವೇಳೆ ವಿಜೃಂಭಣೆಯಿಂದ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗದ ಕಾರಣ ಹಾರ್ದಿಕ್ ಪಾಂಡ್ಯ ಪ್ರೇಮಿಗಳು ದಿನಾಚರಣೆಯ ಗಿಫ್ಟ್ ಆಗಿ ಅದ್ಧೂರಿಯಾಗಿ ಮತ್ತೊಮ್ಮೆ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ-ನತಾಶಾ ಪ್ರೀತಿಯ ವಿಚಾರಕ್ಕೆ ಬಂದರೆ, ನತಾಶಾರನ್ನು ಮೊದಲು ನೈಟ್ ಕ್ಲಬ್‌ನಲ್ಲಿ ಭೇಟಿಯಾಗಿದ್ದಾಗಿ ಹಾರ್ದಿಕ್ ಪಾಂಡ್ಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಆ ಸಮಯದಲ್ಲಿ ಹಾರ್ದಿಕ್ ಭಾರತ ತಂಡದಲ್ಲಿ ಆಡುತ್ತಾರೆ ಎಂಬುದು ಅವರ ನತಾಶಾಗೆ ತಿಳಿದಿರಲಿಲ್ಲ. ಹಾರ್ದಿಕ್ ಜನವರಿ 1, 2020 ರಂದು ನತಾಶಾ ಅವರನ್ನು ಸಮುದ್ರದ ಮಧ್ಯದಲ್ಲಿ ಪ್ರಪೋಸ್ ಮಾಡಿ ಅಚ್ಚರಿ ನೀಡಿದ್ದರು.
ಹಾರ್ದಿಕ್ ಪಾಂಡ್ಯ ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಿದ್ದಾರೆ. ದೀರ್ಘ ಕಾಲದ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಹಾರ್ದಿಕ್ ಪಾಂಡ್ಯ ಸರ್ಜರಿಗೆ ಒಳಗಾಗಿ ಸ್ವಲ್ಪ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ನಂತರ ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟು, ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿ ಮಿಂಚುತ್ತಿದ್ದಾರೆ.