ಯುವರಾಜ್ ಸಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ. 2007 ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದಾಗಿ 3 ವರ್ಷಗಳ ನಂತರ, ಯುವಿ ಮತ್ತೆ 2011 ರ ವಿಶ್ವಕಪ್ ವೇಳೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಗೆಲ್ಲುವ ಮೂಲಕ ವಿಶ್ವಕಪ್ನಲ್ಲಿ ಎರಡು ಬಾರಿ ಸರಣಿ ಶ್ರೇಷ್ಠ ಪಡೆದ ಏಕೈಕ ಆಟಗಾರ ಎನಿಸಿಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಹೆಚ್ಚು ಬೇಡಿಕೆಯ ಆಟಗಾರರಲ್ಲಿ ಯುವಿ ಗುರುತಿಸಿಕೊಂಡಿದ್ದರು. ಹೀಗಾಗಿಯೇ 2014 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿ ತಂಡವು ಯುವರಾಜ್ ಅವರನ್ನು 14 ಕೋಟಿಗಳಿಗೆ ಖರೀದಿಸಿತ್ತು. 2015 ರ ಸೀಸನ್ನಲ್ಲಿ ಯುವಿಯನ್ನು ದೆಹಲಿ ಡೇರ್ಡೆವಿಲ್ಸ್ ಫ್ರ್ಯಾಂಚೈಸಿ 16 ಕೋಟಿಗೆ ತನ್ನದಾಗಿಸಿತು. ಹೀಗಾಗಿ, ಯುವರಾಜ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಆದರೆ ಬಳಿಕ ಕ್ರಿಸ್ ವೋಕ್ಸ್ ಈ ದಾಖಲೆ ಮುರಿದಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ದುಬಾರಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಯುವರಾಜ್ ಸಿಂಗ್ ದಾಖಲೆ ಬರೆದಿದ್ದಾರೆ. 132 ಐಪಿಎಲ್ ಪಂದ್ಯಗಳನ್ನಾಡಿರುವ ಯುವಿ ಒಟ್ಟಾರೆ 36 ವಿಕೆಟ್ ಕಬಳಿಸಿದ್ದಾರೆ. 2009ರ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಹಾಗೂ ಡೆಕ್ಕನ್ ಚಾರ್ಜರ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಒಂದೇ ಸೀಸನ್ನಲ್ಲಿ 2 ಹ್ಯಾಟ್ರಿಕ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದರು.
ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದಲ್ಲಿ 6 ಐಸಿಸಿ ಫೈನಲ್ಸ್ ಆಡಿದ್ದಾರೆ. 2002 ಚಾಂಪಿಯನ್ಸ್ ಟ್ರೋಫಿ, 2003 ವಿಶ್ವಕಪ್, 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2014ರ ಟಿ20 ವಿಶ್ವಕಪ್ ಮತ್ತು 2017 ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು, ಕ್ಯಾನ್ಸರ್ ಪೀಡಿತರಾಗಿ ಗುಣಮುಖ ಹೊಂದಿದ ನಂತರ ಯುವಿ you we can ಎಂಬ ಸಂಘಟನೆ ಜತೆಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ.