ಇಂದು ಮುಂಜಾನೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರ ಮೆದುಳು ಮತ್ತು ಬೆನ್ನುಹುರಿಯ ಎಂಎಸ್ಐ ಸ್ಕ್ಯಾನ್ ರಿಪೋರ್ಟ್ ವೈದ್ಯರಿಗೆ ಲಭ್ಯವಾಗಿದ್ದು, ಯಾವುದೇ ಅಪಾಯವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ರಿಷಭ್ ಪಂತ್ ಅವರಿಗೆ ಮೊದಲು ರೂರ್ಕಿಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ನೀಡಲು ಅಗತ್ಯವಿದ್ದ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದೆ.
ರಿಷಭ್ ಪಂತ್ ಆರೋಗ್ಯದ ಕುರಿತಂತೆ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಪಂತ್ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಮೊಣಕಾಲು ಹಾಗೂ ಬಲ ಪಾದಕ್ಕೆ ಗಾಯವಾಗಿದೆ. ಸದ್ಯ ಅವರಿಗೆ ಕಾಲು ನೋವು ಹೆಚ್ಚಿದ್ದು, ಊತ ಬಂದಿರುವ ಕಾರಣ ಅವರ ಪಾದದ ಮತ್ತು ಮೊಣಕಾಲಿನ ಎಂಆರ್ಐ ಸ್ಕ್ಯಾನ್ ಅನ್ನು ನಾಳೆಗೆ ಮುಂದೂಡಲಾಗಿದೆ ಎಂದು ವಿವರಿಸಿದ್ದಾರೆ.
ರಿಷಭ್ ಪಂತ್ ಬೇಗ ಗುಣಮುಖರಾಗಲಿ ಅಂತ ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವ ಕ್ರಿಕೆಟ್ನ ಹಲವು ಗಣ್ಯರು ನಿರಂತರವಾಗಿ ಸಂದೇಶಗಳನ್ನು ನೀಡುತ್ತಿದ್ದಾರೆ. ಭಾರತ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತ್ರವಲ್ಲದೇ ಪಾಕಿಸ್ತಾನ ತಂಡದ ಹಲವು ಆಟಗಾರರು ಕೂಡ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿ ಪ್ರಾರ್ಥಿಸಿದ್ದಾರೆ.