ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಸೋಲಿಸಿದೆ. ವಿಶ್ವಕಪ್ ಬಳಿಕ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸ ಹೋಗುತ್ತಿದೆ. 24 ವರ್ಷದ ಬಳಿಕ ಮೊದಲ ಬಾರಿಗೆ ಪಾಕ್ ನೆಲಕ್ಕೆ ಕಾಂಗರೂಗಳ ಪಡೆ ಕಾಲಿಡುತ್ತಿದೆ. ಇದು ಮುಂದಿನ ವರ್ಷ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಇದೆ. ಆದರೆ, ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಈ ಪ್ರವಾಸಕ್ಕೆ ಲಭ್ಯ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಅವರ ಮದುವೆ. ಮ್ಯಾಕ್ಸ್ವೆಲ್ ಅವರ ವಿವಾಹ ಮಾರ್ಚ್ ಏಪ್ರಿಲ್ ತಿಂಗಳಲ್ಲೇ ನಿಗದಿಯಾಗಿದೆಯಂತೆ. ಇದೇ ಕಾರಣಕ್ಕೆ ಪಾಕ್ ಪ್ರವಾಸವನ್ನು ಮ್ಯಾಕ್ಸ್ವೆಲ್ ಕೈಬಿಡುವ ಸಾಧ್ಯತೆ ಇದೆ.
ಅಸ್ಟ್ರೇಲಿಯಾ ಸೇರಿ ಪ್ರತಿಯೊಂದು ಟೆಸ್ಟ್ ತಂಡಕ್ಕೂ ಬಿಡುವಿಲ್ಲದ ಕ್ರಿಕೆಟ್ ಸರಣಿಗಳು ಮುಂದಿವೆ. ಒಂದಾದ ಮೇಲೊಂದು ಕ್ರಿಕೆಟ್ ಸರಣಿ, ವಿಶ್ವಕಪ್ಗಳು ನಡೆಯಲಿವೆ. ಮುಂದಿನ ವರ್ಷ ಅಂತ್ಯದಲ್ಲಿ ಮತ್ತೊಂದು ಟಿ20 ವಿಶ್ವಕಪ್ ಇದೆ. ಅಲ್ಲಿಯವರೆಗೂ ನಿರಂತರ ಕ್ರಿಕೆಟ್ ಚಾಲನೆಯಲ್ಲಿರುತ್ತದೆ. ಹೀಗಾಗಿ, ಆಟಗಾರರಿಗೆ ವೈಯಕ್ತಿಕ ಕೆಲಸಕ್ಕೆ ಪುರುಸೊತ್ತೇ ಇರುವುದಿಲ್ಲ. ಇದೇ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ವಿವಾಹಕ್ಕಾಗಿ ಯಾವುದಾದರೊಂದು ಕ್ರಿಕೆಟ್ ಸರಣಿಯನ್ನ ಕೈಬಿಡುವುದು ಅನಿವಾರ್ಯವಾಗಿತ್ತು. ಹೀಗಾಗಿ, 2022ರ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮದುವೆ ಆಗುವ ಸಾಧ್ಯತೆ ಇದೆ.