ನ್ಯೂಜಿಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡಿದ ಭಾರತೀಯ ಮೂಲದ ಐದನೇ ಆಟಗಾರ ಎಜಾಜ್ ಪಟೇಲ್. ಇವರಿಗಿಂತ ಮುಂಚೆ ಭಾರತೀಯ ಮೂಲದ ಟೆಡ್ ಬ್ಯಾಡ್ ಕಾಕ್, ಟಾಮ್ ಪುನಾ, ಈಶ್ ಸೋಧಿ ಮತ್ತು ಜೀತ್ ರಾವಲ್ ಅವರು ಕಿವೀಸ್ ತಂಡದಲ್ಲಿ ಆಡಿದ್ದಾರೆ. ಈಶ್ ಸೋಧಿ ಮತ್ತು ಜೀತ್ ರಾವಲ್ ಈಗಲೂ ಕಿವೀಸ್ ತಂಡದಲ್ಲಿದ್ದಾರೆ. ದಶಕಗಳ ಹಿಂದೆ ಆಡಿದ್ದ ದೀಪಕ್ ಪಟೇಲ್ ಅವರು ಕೀನ್ಯಾದಲ್ಲಿ ಹುಟ್ಟಿದವರು. ಹಾಗೆಯೇ, ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ನಲ್ಲೇ ಹುಟ್ಟಿದವರು.
ಎಜಾಜ್ ಪಟೇಲ್ ಅವರು ಚಿಕ್ಕ ವಯಸ್ಸಿನಲ್ಲೇ ನ್ಯೂಜಿಲೆಂಡ್ ಗೆ ತೆರಳಿ ಕ್ರಿಕೆಟ್ ಅಭ್ಯಾಸ ನಡೆಸಿಕೊಂಡು ಬೆಳೆದರಾದರೂ ನ್ಯೂಜಿಲೆಂಡ್ ಕಿರಿಯರ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಎಜಾಜ್ ಪಟೇಲ್ ಅವರು ವೇಗದ ಬೌಲಿಂಗ್ ಮಾಡುತ್ತಿದ್ದರು. ಆಗ ದೀಪಕ್ ಪಟೇಲ್ ಕೋಚ್ ಆಗಿದ್ದರು. ಅವರು ನೀಡಿದ ಸಲಹೆ ಮೇರೆಗೆ ಎಷ್ಟೋ ವರ್ಷಗಳ ಬಳಿಕ ಎಜಾಜ್ ಪಟೇಲ್ ಸ್ಪಿನ್ ಬೌಲಿಂಗ್ ಮಾಡಲು ಆರಂಭಿಸಿದರು.
2018ರಲ್ಲಿ ನ್ಯೂಜಿಲೆಂಡ್ನ ಪ್ಲಂಕೆಟ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಸ್ಪಿನ್ ಕರಾಮತ್ತು ತೋರಿದ ಎಜಾಜ್ ಪಟೇಲ್, ಕೇವಲ 9 ಪಂದ್ಯಗಳಲ್ಲಿ 48 ವಿಕೆಟ್ ಕಿತ್ತರು. ಆ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಬರೆದರು. ಹಾಗೆಯೇ, ಅತ್ಯುತ್ತಮ ದೇಶೀಯ ಆಟಗಾರ ಎಂಬ ಪ್ರಶಸ್ತಿಯೂ ಅವರಿಗೆ ಲಭಿಸಿತು. ನ್ಯೂಜಿಲೆಂಡ್ ನ ದೇಶೀಯ ಕ್ರಿಕೆಟ್ ನಲ್ಲಿ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದ ಫಲವಾಗಿ ಎಜಾಜ್ ಅವರಿಗೆ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ.