ಇದು ಫ್ರಾಂಚೈಸಿ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ಸರಿಯಾದ ಸಮಯ. ನನ್ನ ಕುಟುಂಬದೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಪ್ರಯಾಣದ ಕಟ್ಟುನಿಟ್ಟಿನ ನಿಯಮಗಳಿಂದ ಫ್ರಾಂಚೈಸಿ ಮಾದರಿಯ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಕಷ್ಟಕರ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎನಿಸಿತು ಎಂದು ಮಾಲಿಂಗ ತಿಳಿಸಿದ್ದಾರೆ.
ನಾನು ಸಂತೋಷದ ನೆನಪುಗಳನ್ನು ಪಡೆದಿದ್ದೇನೆ. ವಿಶ್ವ ಕ್ರಿಕೆಟ್ನಲ್ಲಿ ಅತ್ಯುತ್ತಮ ಫ್ರ್ಯಾಂಚೈಸಿಗಾಗಿ ಇಷ್ಟು ದಿನ ಆಡಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಶ್ರೀಮತಿ ನೀತಾ ಅಂಬಾನಿ, ಕೋಚ್ ಮಹೇಲಾ ಜಯವರ್ಧನೆ, ಆಕಾಶ್ ಅಂಬಾನಿ ಅವರಿಗೆ ಧನ್ಯವಾದ. ಮುಂದಿನ ಸೀಸನ್ಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಲಸಿತ್ ಮಾಲಿಂಗ ತಿಳಿಸಿದ್ದಾರೆ.
ಶ್ರೀಲಂಕಾದ ಯಾರ್ಕರ್ ಮಾಂತ್ರಿಕ ಮಾಲಿಂಗ, ಜಮೈಕಾ ತಲ್ಲವಾಸ್, ಗಯಾನಾ ಅಮೆಜಾನ್ ವಾರಿಯರ್ಸ್, ಖುಲ್ನಾ ಟೈಗರ್ಸ್, ರಂಗ್ಪುರ್ ರೈಡರ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ಸೇರಿದಂತೆ ವಿಶ್ವದಾದ್ಯಂತ ಹಲವು ಟಿ20 ತಂಡಗಳ ಪರ ಆಡಿದ್ದರು. ಅಲ್ಲದೆ 295 ಪಂದ್ಯಗಳಲ್ಲಿ 390 ವಿಕೆಟ್ಗಳನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಲಸಿತ್ ಮಾಲಿಂಗ ಅವರ ವಿದಾಯದ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ, ಅವರ ನಿರ್ಧಾರವನ್ನು ಮುಂಬೈ ಇಂಡಿಯನ್ಸ್ ಆಡಳಿತವು ಗೌರವಿಸುತ್ತದೆ. ನಾವು ಮಾಲಿಂಗ ಇನ್ನು ಐದು ವರ್ಷಗಳ ಕಾಲ ತಂಡದಲ್ಲಿ ಇರಬೇಕೆಂದು ಬಯಸಿದ್ದೆವು. ಏಕೆಂದರೆ ಅವರು ನಮ್ಮ ತಂಡದ ದಂತಕಥೆ. ನಿವೃತ್ತಿ ಬಳಿಕವೂ ಅವರು ನಮ್ಮ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಹೃದಯದಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.