ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಎಂದರೆ ಅದೊಂದು ರೋಚಕತೆ ಸೃಷ್ಟಿಸುವ ಘಟನೆ. ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತು ನೋಡುವ ಘಟನೆ. ವಿಶ್ವಕಪ್ನಂಥ ವೇದಿಕೆಯಲ್ಲಿ ಎರಡೂ ತಂಡಗಳು ಎದುರುಬದುರಾದರೆ ಅದು ಇನ್ನೂ ಮೆಗಾ ಇವೆಂಟ್. ಭಾರತ ವಿರುದ್ಧ ವಿಶ್ವಕಪ್ನಲ್ಲಿ ಪಾಕಿಸ್ತಾನ ಒಮ್ಮೆಯೂ ಗೆಲ್ಲದೇ ಹೋದರೂ ಯಾರೂ ಆ ಅಂಕಿ-ಅಂಶದ ಬಗ್ಗೆ ಗಮನ ಕೊಡುವುದಿಲ್ಲ. ಇವತ್ತಿನ ವಿಶ್ವಕಪ್ ಪಂದ್ಯದಲ್ಲೂ ಕ್ರಿಕೆಟ್ ಪ್ರೇಮಿಗಳಲ್ಲಿ ಕಾತರತೆಯೇ ಮನೆ ಮಾಡಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಪ್ರಮುಖ ಆಟಗಾರರ ಮೇಲೆ ಹೆಚ್ಚಿನ ಗಮನ ನೆಟ್ಟಿದೆ.
Virat Kohli- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಅದ್ಭುತ ಫಾರ್ಮ್ನಲ್ಲಿಲ್ಲ. ಒಂದೂ ಶತಕ ಭಾರಿಸಿಲ್ಲ. ಆದರೂ ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಂದರೆ ಸಾಕು ವಿರಾಟ್ ಕೊಹ್ಲಿ ಹೆಸರು ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಮೊದಲು ಬರುತ್ತದೆ. ಯಾಕೆಂದರೆ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. 84.66 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ, ಪಾಕಿಸ್ತಾನ ವಿರುದ್ಧ ಕೊನೆಯ ಪಂದ್ಯ ಆಡಿ 5 ವರ್ಷಗಳೇ ಆದವು. ಈಗಲೂ ಕೊಹ್ಲಿ ಅದೇ ಲಯದಲ್ಲಿ ಆಡುತ್ತಾರಾ ಗೊತ್ತಿಲ್ಲ. ಕೊಹ್ಲಿ ಐಪಿಎಲ್ನಲ್ಲಿ ನಿರಾಸೆ ಮೂಡಿಸಿದರೂ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಆಟ ಆಡುತ್ತಾರೆ.
KL Rahul- ಕೆಎಲ್ ರಾಹುಲ್: ಟಿ20 ಕ್ರಿಕೆಟ್ ಬಂದರೆ ಟೀಮ್ ಇಂಡಿಯಾಗೆ ಇವರು ಕಿಂಗ್ ರಾಹುಲ್. ಈ ಬಾರಿಯ ಐಪಿಎಲ್ನಲ್ಲಿ ಕೆಎಲ್ ರಾಹುಲ್ 62.60 ಸರಾಸರಿಯಲ್ಲಿ 626 ರನ್ ಕೂಡಿಹಾಕಿದ್ದರು. ಟಿ20 ವಿಶ್ವಕಪ್ಗೆ ಪೂರ್ವಬಾವಿಯಾಗಿ ನಡೆದ ವಾರ್ಮಪ್ ಮ್ಯಾಚ್ಗಳಲ್ಲೂ ಇವರು ತಮ್ಮ ಸಾಮರ್ಥ್ಯ ತೋರಿಸಿದ್ದರು. ಕುತೂಹಲವೆಂದರೆ, ಕೆಎಲ್ ರಾಹುಲ್ ಅವರು ಇವತ್ತು ಆಡಿದರೆ ಅದು ಪಾಕಿಸ್ತಾನ ವಿರುದ್ಧ ಅವರ ಮೊದಲ ಟಿ20 ಪಂದ್ಯ ಆಗಲಿದೆ. ಪಾಕಿಸ್ತಾನ ಕ್ರಿಕೆಟ್ ಕೋಚ್ ಮ್ಯಾಥ್ಯೂ ಹೇಡನ್ ಕೂಡ ಕೆಎಲ್ ರಾಹುಲ್ ಪಾಕಿಸ್ತಾನಕ್ಕೆ ಭಾರೀ ಡೇಂಜರಸ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.
Jasprit Bumrah- ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾಗೆ ಕೆಲವಾರು ವರ್ಷಗಳಿಂದ ಬುಮ್ರಾ ಅವರು ಬೌಲಿಂಗ್ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲೂ ಅವರು ಟೀಮ್ ಇಂಡಿಯಾಗೆ ಅಗತ್ಯ ಇರುವ ಬೌಲರ್. ಇತ್ತೀಚಿನ ಐಪಿಎಲ್ನಲ್ಲೂ ಇವರು ಸಖತ್ ಪ್ರದರ್ಶನ ತೋರಿದ್ದರು. ಅಭ್ಯಾಸ ಪಂದ್ಯಗಳಲ್ಲೂ ಎಫೆಕ್ಟಿವ್ ಎನಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಇವರು 2 ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರಾದರೂ ಬುಮ್ರಾ ಎಷ್ಟು ಮಾರಕ ಎಂಬುದು ಪಾಕ್ ಬ್ಯಾಟರ್ಸ್ಗೆ ಅರಿವಿದೆ. ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಬುಮ್ರಾ ಬೌನ್ಸರ್, ಯಾರ್ಕರ್ಗೆ ಪಾಕಿಸ್ತಾನೀಯರು ಸರಿಯಾಗಿ ಉತ್ತರ ನೀಡಬಲ್ಲರಾ ಎಂದು ನೋಡಬೇಕು.
Babar Azam- ಬಾಬರ್ ಅಜಂ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಟಿ20 ಕ್ರಿಕೆಟ್ನಲ್ಲಿ ವಿಶ್ವದ ನಂಬರ್ 2 ಬೌಲರ್. ಇವರು ಅಂತರರಾಷ್ಟ್ರೀ ಕ್ರಿಕೆಟ್ಗೆ ಕಾಲಿಟ್ಟ ಹೊಸದರಲ್ಲಿ ಇವರನ್ನ ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದು ಕರೆಯಲಾಗುತ್ತಿತ್ತು. ಈಗ ವಿರಾಟ್ ಕೊಹ್ಲಿಯನ್ನ ಮೀರಿಸುವ ವೇಗದಲ್ಲಿ ರನ್ ಕಲೆಹಾಕುತ್ತಿದ್ಧಾರೆ. ಟಿ20 ಕ್ರಿಕೆಟ್ನಲ್ಲಿ ಇವರು 64 ಪಂದ್ಯಗಳಿಂದ 2204 ರನ್ ಗಳಿಸಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಇವರ ಸ್ಥಿರ ಪ್ರದರ್ಶನ ಬಹಳ ಗಮನಾರ್ಹವಾದುದು. ಆದರೆ, ಇತ್ತೀಚಿನ ಕೆಲ ಪಂದ್ಯಗಳಲ್ಲಿ ಇವರು ತುಸು ಲಯ ಕಳೆದುಕೊಂಡಂತೆ ಕಾಣುತ್ತಾರೆ. ಆದರೂ ಒತ್ತಡದ ಸಂದರ್ಭ ಬಂದಾಗ ಸಿಡಿದೇಳುವ ಆಟಗಾರನಾದ್ದರಿಂದ ಇವತ್ತಿನ ಪಂದ್ಯದಲ್ಲಿ ಇವರಿಂದ ದೊಡ್ಡ ಆಟ ಬರುವ ನಿರೀಕ್ಷೆ ಇದೆ.
Shaheen Afridi- ಶಾಹೀನ್ ಅಫ್ರಿದಿ: ಪಾಕಿಸ್ತಾನದ ಉದಯೋನ್ಮುಖ ಫಾಸ್ಟ್ ಬೌಲರ್ ಶಾಹೀನ್. ವೇಗದ ಬೌಲಿಂಗ್ಗೆ ಹೇಳಿ ಮಾಡಿಸಿದ ಎತ್ತರದ ಕಾಯ ಹೊಂದಿರುವ ಇವರು ಪಾಕಿಸ್ತಾನದ ಭವಿಷ್ಯದ ಬಿಗ್ ಸ್ಟಾರ್. ಶೋಯಬ್ ಅಖ್ತರ್, ವಾಸಿಂ ಅಕ್ರಂ ಮೊದಲಾದವರ ಎತ್ತರಕ್ಕೆ ಹೋಗಬಲ್ಲ ಬೌಲರ್ ಎಂದು ಪರಿಗಣಿತವಾಗಿದ್ದಾರೆ. ಇವರು ಎಡಗೈ ವೇಗಿಯಾಗಿರುವುದು ಭಾರತಕ್ಕೆ ತಲೆನೋವಂತೂ ಹೌದು. ಯಾಕೆಂದರೆ ಭಾರತದ ಬ್ಯಾಟುಗಾರರು ಎಡಗೈ ವೇಗದ ಬೌಲರ್ಗಳನ್ನ ಎದುರಿಸುವಾಗ ತುಸು ಪರದಾಡುತ್ತಾರೆ.
Hasan Ali- ಹಸನ್ ಅಲಿ: ಇವರು ಪಾಕಿಸ್ತಾನದ ಬೌಲಿಂಗ್ ಟ್ರಂಪ್ ಕಾರ್ಡ್ ಗಳಲ್ಲಿ ಒಬ್ಬರು. ಬಹಳ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವ ಇವರು ಭಾರತದ ಬ್ಯಾಟರ್ ಗಳಿಗೆ ತಲೆನೋವಾಗಿ ಪರಿಣಮಿಸಬಹುದು. ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇವರು 21 ರನ್ಗೆ 2 ವಿಕೆಟ್ ಪಡೆದಿದ್ದರು. ಆದರೆ, ಭಾರತದ ಮೇಲೆ ಎಷ್ಟು ಪರಿಣಾಮಕಾರಿ ಎನಿಸುತ್ತಾರೆ ಗೊತ್ತಿಲ್ಲ. ಇದು ಭಾರತದ ವಿರುದ್ಧ ಅವರಿಗೆ ಮೊದಲ ಟಿ20 ಪಂದ್ಯ.