ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಮಾರ್ಚ್ 4ರಂದು ಅದ್ದೂರಿ ಆರಂಭ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ತಂಡ ತಮ್ಮ ಉದ್ಘಾಟನಾ ಪಂದ್ಯದಲ್ಲಿ ಒಡತಿ ನೀತಾ ಅಂಬಾನಿ ಸಮ್ಮುಖದಲ್ಲಿ ಭವ್ಯ ಪ್ರದರ್ಶನ ನೀಡಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಾರ್ಚ್ 4 ರಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿ 143 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಪಂದ್ಯದ ನಂತರ ನೀತಾ ಅಂಬಾನಿ ಅವರು ಸಂಪ್ರದಾಯದಂತೆ ಮುಂಬೈ ಇಂಡಿಯನ್ಸ್ ತಂಡದ ಡ್ರೆಸಿಂಗ್ ರೂಮ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ತಂಡದ ಆಟಗಾರ್ತಿಯರನ್ನ ಅಭಿನಂದಿಸಿದರು. ಈ ಸಂದರ್ಭದಲ್ಲಿ ಇದು ಮಹಿಳಾ ಕ್ರಿಕೆಟ್ಗೆ ಅಪ್ರತಿಮ ದಿನ ಮತ್ತು ಅಪ್ರತಿಮ ಕ್ಷಣ. ನಾನು ಮಹಿಳಾ ಪ್ರೀಮಿಯರ್ ಲೀಗ್ ಭಾಗವಾಗಿದ್ದಕ್ಕೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ ಎಂದು ಪಂದ್ಯ ಮುಗಿದ ನಂತರ ನಡೆದ ಸಂದರ್ಶನದಲ್ಲಿ ನೀತಾ ಅಂಬಾನಿ ಹೇಳಿದ್ದಾರೆ.
ಇನ್ನು ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ 30 ಎಸೆತಗಳಲ್ಲಿ 65, ಅಮೆಲಿಯಾ ಕೆರ್ 24 ಎಸೆತಗಳಲ್ಲಿ 45, ಹೇಲಿ ಮ್ಯಾಥ್ಯೂಸ್ 31 ಎಸೆತಗಳಲ್ಲಿ 47 ರನ್, ಸೀವರ್ 18 ಎಸೆತಗಳಲ್ಲಿ 23 ರನ್ಗಳಿಸಿ ಮೊದಲ ಪಂದ್ಯದಲ್ಲೇ ತಂಡ ದ್ವಿಶತಕ ದಾಖಲಿಸಲು ನೆರವಾಗಿದ್ದಾರೆ. ಗುಜರಾತ್ ಪರ ಸ್ನೇಹ್ ರಾಣಾ 2, ಜಾರ್ಜಿಯಾ ವೇರ್ಹ್ಯಾಮ್, ತನ್ವರ್ ಹಾಗೂ ಗಾರ್ಡ್ನರ್ ತಲಾ ಒಂದು ವಿಕೆಟ್ ಪಡೆದರು.