ಡಿಸೆಂಬರ್ 19, 2020...ಈ ದಿನವನ್ನು ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಇದೇ ದಿನ ಭಾರತ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಇನಿಂಗ್ಸ್ ಅಂತ್ಯಗೊಳಿಸಿತ್ತು. ಹೌದು, ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 17 ರಿಂದ ಆರಂಭವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕೇವಲ 36 ರನ್ಗಳಿಗೆ ಸರ್ವಪತನ ಕಂಡಿತು.
ಮೊದಲ ಟೆಸ್ಟ್ ಸೋಲು ಪ್ರತಿದಾಳಿಯ ಬಗ್ಗೆ ಟೀಮ್ ಇಂಡಿಯಾ ಮಾತನಾಡಿತ್ತು. ಏಕೆಂದರೆ ಮುಂದಿನ ಪಂದ್ಯ ಗೆಲ್ಲುವುದು ತಂಡಕ್ಕೆ ಬಹಳ ಮುಖ್ಯವಾಗಿತ್ತು. ಇದಕ್ಕಾಗಿ ಮಧ್ಯರಾತ್ರಿ ಸಭೆ ನಡೆಸಲಾಯಿತು. ಅಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ಅಜಿಂಕ್ಯ ರಹಾನೆ ಯೋಜನೆ ರೂಪಿಸಿದ್ದರು. ಈ ಬಿಗ್ ಪ್ಲ್ಯಾನ್ಗೆ ಕೋಚ್ ರವಿಶಾಸ್ತ್ರಿ ಸಹಾಯ ಮಾಡಿದ್ದರು. ಅದರಂತೆ ಮಿಷನ್ ಮೆಲ್ಬೋರ್ನ್ ಕಾರ್ಯತಂತ್ರ ರೂಪಿಸಲಾಯಿತು ಎಂದು ಶ್ರೀಧರ್ ತಿಳಿಸಿದರು.
ಕೊಹ್ಲಿ ನಮ್ಮ ಬಳಿಗೆ ಬಂದು, ಸೋಲಿನ ಬಗ್ಗೆ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ, ಮಿಷನ್ ಮೆಲ್ಬೋರ್ನ್ನ ಯೋಜನೆಗಳ ಬಗ್ಗೆ ಮಾತನಾಡಲಾಯಿತು. ಇದೇ ವೇಳೆ 36 ರನ್ ಎಂಬುದು ನಮಗೆ ಬ್ಯಾಡ್ಜ್. ಈ ಬ್ಯಾಡ್ಜ್ ತಂಡವನ್ನು ಉತ್ತಮಗೊಳಿಸುತ್ತದೆ ಎಂದು ಕೋಚ್ ರವಿಶಾಸ್ತ್ರಿ ತಿಳಿಸಿದ್ದರು. ಇದಾಗ್ಯೂ ನಮ್ಮಲ್ಲಿಯೇ ಕೆಲವು ಗೊಂದಲಗಳಿದ್ದವು. ಬಳಿಕ ಕೊಹ್ಲಿ ಅಜಿಂಕ್ಯ ರಹಾನೆ ಅವರನ್ನು ಕರೆದರು.
ಸಾಮಾನ್ಯವಾಗಿ ತಂಡಗಳು ಕಡಿಮೆ ಸ್ಕೋರ್ನಲ್ಲಿ ಆಲೌಟಾದರೆ ತಮ್ಮ ಬ್ಯಾಟಿಂಗ್ ಅನ್ನು ಬಲಪಡಿಸುತ್ತವೆ. ಆದರೆ ರವಿಶಾಸ್ತ್ರಿ, ವಿರಾಟ್ ಮತ್ತು ರಹಾನೆ ಬೌಲಿಂಗ್ ಅನ್ನು ಬಲಪಡಿಸುವ ಯೋಜನೆ ರೂಪಿಸಿದ್ದರು. ಅದಕ್ಕಾಗಿಯೇ ನಾವು ವಿರಾಟ್ ಕೊಹ್ಲಿ ಬದಲಿಗೆ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಈ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಎಂದು ಸಾಬೀತಾಯಿತು ಎಂದು ಮೊಲ್ಬೋರ್ನ್ ಪಂದ್ಯದ ಜಯದ ಹಿಂದಿನ ಕಾರ್ಯತಂತ್ರದ ಬಗ್ಗೆ ಶ್ರೀಧರ್ ಅವರು ತಿಳಿಸಿದರು.
ಇದೇ ವೇಳೆ ರವಿಶಾಸ್ತ್ರಿ ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್ಗಳ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದ್ದರು. ಬಲಗೈ ಬ್ಯಾಟ್ಸ್ಮನ್ಗಳಿಂದಾಗಿ ಆಸ್ಟ್ರೇಲಿಯಾದ ಬೌಲರ್ಗಳು ನಿಖರವಾಗಿ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ನಾವು ಎಡಗೈ ಬ್ಯಾಟ್ಸ್ಮನ್ರನ್ನು ತಂಡಕ್ಕೆ ಕರೆತಂದರೆ, ಅವರ ಲೈನ್ ಅ್ಯಂಡ್ ಲೆಂಗ್ತ್ ತಪ್ಪಲಿದೆ ಎಂದು ತಿಳಿಸಿದ್ದರು. ಈ ತಂತ್ರವು ಫಲ ನೀಡಿತು. ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲಿ 5 ಬೌಲರ್ಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ಶ್ರೀಧರ್ ತಿಳಿಸಿದರು.
ಹೀಗೆ ಒಂದೇ ದಿನದಲ್ಲಿ ರೂಪಿಸಿದ ಯೋಜನೆಗಳ ಫಲವಾಗಿ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲೂ ಟೀಮ್ ಇಂಡಿಯಾ ಮೆಲ್ಬೋರ್ನ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು 8 ವಿಕೆಟ್ಗಳಿಂದ ಮಣಿಸಿತು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಎರಡು ಕಾರಣಗಳಿಗಾಗಿ ನೆನಪಿನಲ್ಲಿ ಉಳಿಯುವಂತಾಯಿತು. ಒಂದು ಟೀಮ್ ಇಂಡಿಯಾ 36 ರನ್ಗಳಿಗೆ ಆಲೌಟ್ ಆಗಿದ್ದು, ಇನ್ನೊಂದು ಈ ಹೀನಾಯ ಸೋಲಿನ ಬಳಿಕ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು 2-1 ಅಂತರದಿಂದ ಐತಿಹಾಸಿಕ ಜಯ ದಾಖಲಿಸಿ ಹೊಸ ಇತಿಹಾಸ ಬರೆದಿರುವುದು.