ಕ್ರಿಕೆಟ್ ಮತ್ತು ಸಿನಿಮಾ ನಂಟಿಗೆ ಅದರದ್ದೇ ಇತಿಹಾಸ ಇದೆ. ಕ್ರಿಕೆಟ್ ತಾರೆಗಳನ್ನ ಸಿನಿಮಾ ನಟಿಯರು ಮುತ್ತಿಕೊಳ್ಳುತ್ತಾರೋ, ಸಿನಿಮಾ ತಾರೆಗಳ ಸುತ್ತ ಕ್ರಿಕೆಟ್ ತಾರೆಗಳು ಮುತ್ತಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಕ್ರಿಕೆಟ್ ಆಟಗಾರ, ಸಿನಿಮಾ ನಟಿ ಜೋಡಿ ಹಲವರಿದ್ಧಾರೆ. ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಜೋಡಿ, ಹರ್ಭಜನ್ ಸಿಂಗ್ ಗೀತಾ ಬಸ್ರಾ ಜೋಡಿ, ಜಹೀರ್ ಖಾನ್ ಸಾಗರಿಕಾ ಘಟಗೆ ಜೋಡಿ ನಮ್ಮ ಮುಂದಿವೆ. ಇವರ ಜೊತೆಗೆ ಕ್ರಿಕೆಟಿಗರಿಗೆ ಗರ್ಲ್ ಫ್ರೆಂಡ್ ಆಗಿರುವರು, ಆಗಿದ್ದವರು ಹಲವು ಸಿನಿಮಾ ನಟಿಯರಿದ್ಧಾರೆ. ಈಗ ಈ ಸ್ಟಾರ್ ಜೋಡಿಗಳ ಪಟ್ಟಿಗೆ ಕೆಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಸೇರ್ಪಡೆಯಾಗಿದ್ದಾರೆ.
ಕುತೂಹಲದ ವಿಷಯವೆಂದರೆ ಸುನೀಲ್ ಶೆಟ್ಟಿ ಕೂಡ ತನ್ನ ಮಗಳು ಮತ್ತು ಕೆಎಲ್ ರಾಹುಲ್ ನಡುವಿನ ಸ್ನೇಹಕ್ಕೆ ಅಧಿಕೃತ ಮುದ್ರೆ ಒತ್ತಿದಂತೆಯೂ ಕಾಣುತ್ತಿದೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಒಂದು ಪೋಸ್ಟ್ನಲ್ಲಿ ಅವರು ತಮ್ಮ ಮಗ ಆಹಾನ್ ಮತ್ತು ಕೆಎಲ್ ರಾಹುಲ್ ಜಾಗಿಂಗ್ ಹೋಗುತ್ತಿರುವ ವಿಡಿಯೋ ಹಾಕಿದ್ದರು. ನನ್ನ ಪ್ರೀತಿ ನನ್ನ ಶಕ್ತಿ ಎಂದು ಕ್ಯಾಪ್ಷನ್ ಕೊಟ್ಟು ಆಹಾನ್ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರನ್ನ ಟ್ಯಾಗ್ ಕೂಡ ಮಾಡಿದ್ದರು.
ಕೆಎಲ್ ರಾಹುಲ್ ಕೂಡ ಈಕೆಯನ್ನ ತನ್ನ ಪಾರ್ಟ್ನರ್ ಎಂದು ಹೇಳಿಕೊಂಡಿದ್ದಾರೆ. ಲಂಡನ್ನಲ್ಲಿ ನಡೆದ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಕಳುಹಿಸುವಾಗ ಆಟಗಾರರ ಪತ್ನಿ ಅಥವಾ ಸಂಗಾತಿಯ ಹೆಸರನ್ನ ತಿಳಿಸಬೇಕೆಂದು ಬಿಸಿಸಿಐ ತಿಳಿಸಿತ್ತು. ಆಗ ಕೆಎಲ್ ರಾಹುಲ್ ಅವರು ಆತಿಯಾರನ್ನ ತನ್ನ ಪಾರ್ಟ್ನರ್ ಎಂದು ಹೇಳಿ ಮಾಹಿತಿ ಕೊಟ್ಟಿದ್ದರು. ಆಕೆ ಆ ಪಂದ್ಯದಲ್ಲಿ ರಾಹುಲ್ ಜೊತೆ ಲಂಡನ್ಗೆ ಪ್ರಯಾಣಿಸಿದ್ದರು. ಸೌಥಾಂಪ್ಟನ್ನಲ್ಲಿ ರಾಹುಲ್ ಇದ್ದ ಅದೇ ಬಯೋಬಬಲ್ ವ್ಯವಸ್ಥೆಯಲ್ಲಿ ಆತಿಯಾ ಕೂಡ ಇದ್ದರು.