ನಿಕೋಲಸ್ ಪೂರನ್, ವೆಸ್ಟ್ ಇಂಡೀಸ್: ಸದ್ಯ ವೆಸ್ಟ್ ಇಂಡೀಸ್ ತಂಡದ ನಾಯಕನಾಗಿರುವುದು ಆಲ್ರೌಂಡರ್ ಜೇಸನ್ ಹೋಲ್ಡರ್. ನಾಯಕನಾಗಿ ಅಷ್ಟೊಂದು ಯಶಸ್ಸು ಕಾಣದ ಇವರು 84 ಏಕದಿನ ಪಂದ್ಯಗಳಲ್ಲಿ 24ನ್ನಷ್ಟೆ ಗೆದ್ದಿದ್ದಾರೆ. ಅಲ್ಲದೆ ವಿಶ್ವಕಪ್ನಲ್ಲಿ ನೀಡಿದ ಕಳಪೆ ಪ್ರದರ್ಶನ ಇವರ ಹುದ್ದೆಗೆ ಕಂಟಕವಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ಅಂಡರ್-19 ತಂಡದ ನಾಯಕನಾಗಿದ್ದ ಪೂರನ್ ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಆಗುವ ಎಲ್ಲ ಲಕ್ಷಣಗಳಿವೆ.
ಬಾಬರ್ ಅಜಾಮ್, ಪಾಕಿಸ್ತಾನ: ಏಕದಿನ ಕ್ರಿಕೆಟ್ನಲ್ಲಿ ಉತ್ತಮ ರೆಕಾರ್ಡ್ ಹೊಂದಿರುವ ಈಗಿರುವ ಪಾಕ್ ನಾಯಕ 36 ವರ್ಷದ ಸರ್ಫರಾಜ್ ಅಹ್ಮದ್ 2023 ವಿಶ್ವಕಪ್ ವೇಳೆಗೆ ನಿವೃತ್ತಿ ಹೊಂದಿರುತ್ತಾರೆ. ಹೀಗಾಗಿ ಪಾಕ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಬಾಬರ್ಗೆ ಒಲಿಯಲಿದೆ. ಇವರುಕೂಡ ಅಂಡರ್-19 ತಂಡದ ನಾಯಕನಾಗಿ 21 ಪಂದ್ಯಗಳಲ್ಲಿ 13 ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ.
ರೋಹಿತ್ ಶರ್ಮಾ, ಭಾರತ: ಕೆಲ ಕ್ರಿಕೆಟ್ ದಿಗ್ಗಜರ ಕೂಗು ರೋಹಿತ್ ಶರ್ಮಾಗೆ ಈಗಲೇ ಟೀಂ ಇಂಡಿಯಾ ನಾಯಕನ ಪಟ್ಟ ನೀಡಬೇಕು ಎಂಬುದು. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಸೇರಿ ಬಹುದೊಡ್ಡ ಎರಡು ಟೂರ್ನಮೆಂಟ್ ಅನ್ನು ಕಳೆದುಕೊಂಡಿದ್ದು. ರೋಹಿತ್ ನಾಯಕನಾಗಿ ಸಾಕಷ್ಟು ಯಶಸ್ಸು ಸಾಧಿಸಿದ್ದು ಐಪಿಎಲ್ನಲ್ಲಿ ಸಾಭೀತು ಮಾಡಿದ್ದಾರೆ. ಹೀಗಾಗಿ ಕೊಹ್ಲಿ ಸ್ಥಾನವನ್ನು ಸದ್ಯದಲ್ಲೆ ರೋಹಿತ್ ವಹಿಸಲಿದ್ದಾರೆ.
ಜಾಸ್ ಬಟ್ಲರ್, ಇಂಗ್ಲೆಂಡ್: ಇಂಗ್ಲೆಂಡ್ ತಂಡದ ಯಶಸ್ವಿ ನಾಯಕ ಇಯಾನ್ ಮಾರ್ಗನ್. ಇದಕ್ಕೆ 2019 ವಿಶ್ವಕಪ್ ಸಾಕ್ಷಿ. ಆದರೆ, ಸತತ ಇಂಜುರಿಯಿಂದ ಬಳಲುತ್ತಿರುವ ಮಾರ್ಗನ್ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ನಾನು ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿದ್ದರು. ಹೀಗಾಗಿ ಉಪ ನಾಯಕನಾಗಿ ಅನುಭವ ಇರುವ ಜಾಸ್ ಬಟ್ಲರ್ ಮುಂದಿನ ದಿನಗಳಲ್ಲಿ ಆಂಗ್ಲರನ್ನು ಮುನ್ನಡೆಸಲಿದ್ದಾರೆ.
ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ: ಚೆಂಡು ವಿರೂಪ ಪ್ರಕರಣದ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಮುಂದಿನ ನಾಯಕ ಎಂದೇ ಹೇಳಲಾಗುತ್ತಿದೆ. ಇತ್ತ ಆ್ಯರೋನ್ ಫಿಂಚ್ ನಾಯಕನಾಗಿ ಆಸ್ಟ್ರೇಲಿಯಾವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಇವರ ನಾಯಕತ್ವದಡಿಯಲ್ಲಿ ಆಸೀಸ್ 27 ಪಂದ್ಯಗಳನ್ನಾಡಿ 17 ಗೆದ್ದು ಬೀಗಿದೆ. ಆದರೆ 36 ವರ್ಷದ ಫಿಂಚ್ ಮುಂದಿನ ವಿಶ್ವಕಪ್ ವರೆಗೆ ಆಡುವುದು ಅನುಮಾನ. ಹೀಗಾಗಿ ಏಕದಿನಕ್ಕೆ ಕಮ್ಬ್ಯಾಕ್ ಮಾಡಲಿರುವ ಸ್ಮಿತ್ 2023ರ ವಿಶ್ವಕಪ್ನಲ್ಲಿ ಕಾಂಗರೂ ಪಡೆಯನ್ನು ಮುನ್ನಡೆಸಲಿದ್ದಾರೆ.