ಅಭಿಮಾನಿಗಳು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಯನ್ನು ಬಳ ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC Final) ಫೈನಲ್‌ಗೆ ತಲುಪುತ್ತದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಭಾರತ ತವರಿನಲ್ಲಿ ನಡೆದಿದ್ದ 2017 ರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ರಾಹುಲ್ 2022 ರಲ್ಲಿ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 17.12 ಸರಾಸರಿ ಹೊಂದಿದ್ದರು. ಅವರು ಕೇವಲ ಒಂದು ಅರ್ಧ ಶತಕವನ್ನು ಮಾತ್ರ ಬಾರಿಸಿದ್ದಾರೆ. ಮತ್ತೊಂದೆಡೆ, ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಅಂದಿನಿಂದ ಅವರು ಎಲ್ಲಾ ಮಾದರಿಯಲ್ಲಿ ಸತತವಾಗಿ ರನ್ ಗಳಿಸುತ್ತಿದ್ದಾರೆ. ಹಾಗಾಗಿ ಆರಂಭಿಕರ ಆಯ್ಕೆ ಮ್ಯಾನೇಜ್ಮೆಂಟ್ಗೆ ತಲೆ ನೋವು ತರಲಿದೆ.
ಬಾಂಗ್ಲಾದೇಶದಲ್ಲಿ 3 ವರ್ಷಗಳ ಬಳಿಕ ಶತಕ ಸಿಡಿಸಿದ ಚೇತೇಶ್ವರ ಪೂಜಾರ ಆರಂಭಿಕರ ನಂತರ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಮುಂದಿನ ಸ್ಥಾನವನ್ನು ವಿರಾಟ್ ಕೊಹ್ಲಿ ತುಂಬಲಿದ್ದಾರೆ, ಅವರು ಏಕದಿನ ಮತ್ತು ಟಿ20 ಫಾರ್ಮೇಟ್ನಲ್ಲಿ ಫಾರ್ಮ್ ಮರಳಿದ ನಂತರ ಟೆಸ್ಟ್‌ನಲ್ಲಿ ತಮ್ಮಸಾಮರ್ಥ್ಯವನ್ನು ತೋರಿಸಲು ಕಾಯುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬೆನ್ನುನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಸೇವೆಯನ್ನು ಟೀಂ ಇಂಡಿಯಾ ಕಳೆದುಕೊಳ್ಳಲಿದೆ.
ಸೂರ್ಯಕುಮಾರ್ ಆಯ್ಕೆ ಕಷ್ಟ: ಅಯ್ಯರ್ ಸ್ಪಿನ್ ಬೌಲಿಂಗ್ಗೆ ಪರಿಣಾಮಕಾರಿಯಾಗಿ ಆಡಬಲ್ಲರು. ಅದೇ ರೀತಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಕೂಡ ತಂಡಕ್ಕೆ ಗೈರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಆಕ್ರಮಣಕಾರಿ ಆಯ್ಕೆಯಾಗಿ ತಂಡದಲ್ಲಿ ಸ್ಥಾನ ಪಡೆಯಬಹುದು. ಇಲ್ಲದಿದ್ದರೆ ಕೆಎಲ್ ರಾಹುಲ್ ಅವರು ಉತ್ತಮ ಸ್ಪಿನ್ ಆಡುವುದರಿಂದ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ, ಹಾಗಾಗಿ ಟಿ20 ತಂಡದ ನಂ.1 ಬ್ಯಾಟರ್ ಸೂರ್ಯಾ ಕುಮಾರ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿ ಪರಿಣಮಿಸಿದೆ.
ಇಶಾನ್, ಭರತ್ ನಡುವಿನ ಪೈಪೋಟಿ : ಇಶಾನ್ ಕಿಶನ್ ಅಥವಾ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಕರ್ತವ್ಯಗಳಿಗೆ ಸ್ಪರ್ಧಿಸಬಹುದು. ಇಶಾನ್ ಕಿಶನ್ ಕೂಡ ಆಕ್ರಮಣಕಾರಿ ಆಯ್ಕೆಯಾಗಿ ಆಡಬಲ್ಲರು. ಆದರೆ ಇಶಾನ್‌ಗೆ ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ತೆಲುಗು ಆಟಗಾರ ಕೆಎಸ್ ಭರತ್ ಟೆಸ್ಟ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 2021-22ರ ಋತುವಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಅವರು ಅತ್ಯುತ್ತಮ ಕೀಪರ್ ಎಂದು ಸಾಬೀತುಪಡಿಸಿದರು. ಹಾಗಾಗಿ ರೋಹಿತ್ ಭರತ್ ಮೇಲೆ ಒಲವು ತೋರುವ ಸಾಧ್ಯತೆ ಇದೆ.
ಮೂವರು ಸ್ಪಿನ್ನರ್‌ಗಳಿಗೆ ಆದ್ಯತೆ? : ರವೀಂದ್ರ ಜಡೇಜಾ ಮತ್ತು ಅಶ್ವಿನ್ ಬೌಲಿಂಗ್ ಆಲ್ ರೌಂಡರ್ ಗಳ ಪಾತ್ರ ನಿರ್ವಹಿಸಲಿದ್ದಾರೆ. ಮೂರನೇ ಸ್ಪಿನ್ ಆಯ್ಕೆಗೆ, ಬ್ಯಾಟಿಂಗ್ ಸಹ ಮಾಡಬಲ್ಲ ಅಕ್ಷರ್ ಪಟೇಲ್‌ಗೆ ಅವಕಾಶ ಸಿಗಬಹುದು. ಅಥವಾ ಆಸೀಸ್ ವಿರುದ್ಧ ಮಣಿಕಟ್ಟಿನ ಸ್ಪಿನ್ನರ್, ಕುಲದೀಪ್ ಯಾದವ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಭಾರತ ಮೂರು ಸ್ಪಿನ್ನರ್‌ಗಳಿಗೆ ಹೋದರೆ, ಮೊಹಮ್ಮದ್ ಶಮಿಗೆ ಉಮೇಶ್ ಯಾದವ್ ಅಥವಾ ಕೆಲವು ಪಂದ್ಯಗಳಿಂದ ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ಮೊಹಮ್ಮದ್ ಸಿರಾಜ್ ಆಯ್ಕೆಯಾಗಬಹುದು.