ಇತ್ತ ನಿನ್ನೆ ದೆಹಲಿಯಲ್ಲಿ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ವೀಕ್ಷಿಸಿದ ನಂತರ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಪಶ್ಚಿಮ ಬಂಗಾಳವು ಚಲನಚಿತ್ರವನ್ನು ನಿಷೇಧಿಸುವ ಮೂಲಕ ‘ತಪ್ಪು ಮಾಡುತ್ತಿದೆ’ ಎಂದು ಹೇಳಿದ್ದಾರೆ. ‘ಸತ್ಯವನ್ನು ಮಾತನಾಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲವೇ? ಭಯೋತ್ಪಾದಕ ಸಂಘಟನೆಗಳಿಂದ ನೀವು (ಮಮತಾ ಬ್ಯಾನರ್ಜಿ) ಏನು ಪಡೆಯುತ್ತೀರಿ?’ ಎಂದು ಪ್ರಶ್ನಿದ್ದಾರೆ.
ಕೇರಳದಲ್ಲಿ 32,000 ಮಹಿಳೆಯರನ್ನು ಪ್ರೀತಿಸುವ ನಾಟಕವಾಡಿ ಇಸ್ಲಾಂಗೆ ಮತಾಂತರಗೊಳಿಸಿ ಅವರನ್ನು ಐಸಿಸ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂದು ಸಿನಿಮಾದ ಟ್ರೇಲರ್‌ನಲ್ಲಿ ಹೇಳಿದಾಗಿನಿಂದ ಈ ಸಿನಿಮಾ ವಿವಾದಕ್ಕೆ ಸಿಲುಕಿತ್ತು. ವಿವಾದ ಭುಗಿಲೇಳುತ್ತಿದ್ದಂತೆ 32000 ಬದಲಿಗೆ ಕೇರಳದ ವಿವಿಧ ಭಾಗಗಳಲ್ಲಿ ನಡೆದ ಮೂರು ಯುವತಿಯರ ನೈಜ ಕಥೆ ಎಂದು ಸಿನಿಮಾ ತಂಡ ತನ್ನ ಹೇಳಿಕೆಯನ್ನು ಬದಲಾಯಿಸಿತ್ತು.
ಕೇರಳದ ಆಡಳಿತ ಪಕ್ಷ ಸಿಪಿಎಂ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ‘ಚಲನಚಿತ್ರ ನಿರ್ಮಾಪಕರು ಉದ್ದೇಶಪೂರ್ವಕವಾಗಿ ವೈಭವೀಕರಣ ಮತ್ತು ಹಿಡನ್ ಅಜೆಂಡಾದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ಕೇರಳದಲ್ಲಿ ರಾಜಕೀಯ ಲಾಭ ಪಡೆಯುವ ಬಲಪಂಥೀಯ ಪ್ರಯತ್ನಗಳ ಹಿನ್ನೆಲೆಯಲ್ಲಿ ಇಂತಹ ‘ಪ್ರಚಾರ ಚಿತ್ರಗಳನ್ನು’ ನೋಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.