ಬಿಜೆಪಿಯ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಕೂಡ ಈ ಹಿಂದೆ ಚಲನಚಿತ್ರವನ್ನ ತೆರಿಗೆ ಮುಕ್ತಗೊಳಿಸಿತ್ತು . ನಿರ್ಧಾರವನ್ನು ಪ್ರಕಟಿಸಿದ ನಂತರ ಮಾತನಾಡಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ "ಚಿತ್ರವು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಮತ್ತು ಅದರ ಭೀಕರ ಮುಖವನ್ನು ಹೊರತರುತ್ತದೆ " ಎಂದು ಶ್ಲಾಘಿಸಿದ್ದರು.
ದೇಶಾದ್ಯಂತ ಬಿಜೆಪಿ ನಾಯಕರು ರಾಜ್ಯ ಸರ್ಕಾರಗಳನ್ನು, ವಿಶೇಷವಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ, 'ದಿ ಕೇರಳ ಸ್ಟೋರಿ'ಗೆ ತೆರಿಗೆ ಮುಕ್ತ ಸ್ಥಾನಮಾನವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಹಾಗೂ ಸುದೀಪ್ತೋ ಸೇನ್ ನಿರ್ದೇಶನದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಮೂಡಿಬಂದಿದ್ದು, ಕಳೆದ ತಿಂಗಳು ಅದರ ಟ್ರೇಲರ್ ಬಿಡುಗಡೆಯಾದಾಗಲೇ ಭಾರಿ ವಿವಾದ ಹುಟ್ಟುಹಾಕಿತ್ತು.
ಸಿಪಿಎಂ ನೇತೃತ್ವದ ಕೇರಳ ಸರ್ಕಾರವು ಚಿತ್ರದ ನಿರ್ಮಾಪಕರ ಮೇಲೆ ಹರಿಯಾಯ್ದಿದೆ. ಈ ಸಂಘಪರಿವಾರದ ಪ್ರಚಾರವನ್ನು ಚಿತ್ರದಲ್ಲಿ ತೋರಿಸಲು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯಗಳು, ತನಿಖಾ ಸಂಸ್ಥೆಗಳು ಮತ್ತು ಕೇಂದ್ರದಿಂದ ತಿರಸ್ಕರಿಸಲ್ಪಟ್ಟಿರುವ ಲವ್ ಜಿಹಾದ್ ಎಂಬ ಪರಿಕಲ್ಪನೆಯನ್ನು ಎತ್ತಿ ತೋರಿಸುವ ಮೂಲಕ ಈ ಚಲನಚಿತ್ರವು ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ಬಿಂಬಿಸಲು ಪ್ರಯತ್ನಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ .