ಯುಕೆಯಲ್ಲಿ ಮೊದಲ ಬಾರಿಗೆ ಒಂದು ಅದ್ಭುತ ಸಾಧ್ಯವಾಗಿದ್ದು, ಟ್ರಿಪಲ್ ಡಿಎನ್‌ಎಯೊಂದಿಗೆ ಜನಿಸಿದ ಮೊದಲ ಮಗು ಎಂದು ಬಿಬಿಸಿ ವರದಿ ಮಾಡಿದೆ. ಈ ಪ್ರಕ್ರಿಯೆಯಲ್ಲಿ 99.8% ಡಿಎನ್ಎ ಪೋಷಕರದ್ದಾಗಿದ್ದರೆ, ಇನ್ನುಳಿದ ಡಿಎನ್‌ಎ ಡೋನರ್ ಮಹಿಳೆಯದ್ದು ಎಂದು ತಿಳಿದುಬಂದಿದೆ. ಈ ವಿಧಾನ ಮೈಟೋಕಾಂಡ್ರಿಯಾದ ಕಾಯಿಲೆಗಳೊಂದಿಗೆ ಮಕ್ಕಳು ಜನಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ.
ಮೈಟೋಕಾಂಡ್ರಿಯಾ ರೋಗಗಳು ಅತ್ಯಂತ ಅಪಾಯಕಾರಿ. ಇವುಗಳೊಂದಿಗೆ ಜನಿಸಿದ ಶಿಶುಗಳು ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಸಾಯುವ ಅಪಾಯವಿದೆ. ಅಪಾಯಕಾರಿ ಮೈಟೋಕಾಂಡ್ರಿಯಾದ ಕಾಯಿಲೆಗಳೊಂದಿಗೆ ಮಕ್ಕಳು ಜನಿಸುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಬ್ರಿಟನ್ ವಿಜ್ಞಾನಿಗಳ ತಂತ್ರಜ್ಞಾನವನ್ನು ಬಳಸಿದ್ದಾರೆ. ಮೂರನೇ ಡಿಎನ್‌ಎ ಇದ್ದರೂ, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಹೆತ್ತವರ ಡಿಎನ್‌ಎ ಪರಿಣಾಮ ಬೀರಲಿದೆ ಎಂದು ಪ್ರಾಧಿಕಾರ ಹೇಳಿದೆ. ಇನ್ನು ಈ ವಿಧಾನಕ್ಕೆ ಮೈಟಿಕಾಂಡ್ರಿಯಲ್ ಡೊನೇಶನ್ ಟ್ರೀಟ್ಮೆಂಟ್(MDT) ಎಂದು ಹೆಸರಿಸಲಾಗಿದೆ.
ಈ ವಿಧಾನದಲ್ಲಿ, ಫಲಿತ ಅಂಡಾಣುವಿನಲ್ಲಿರುವ ನ್ಯೂಕ್ಲಿಯರ್ ಡಿಎನ್‌ಎಯನ್ನು ಆರೋಗ್ಯಪೂರ್ಣ ಮೈಟೋಕಾಂಡ್ರಿಯಾವನ್ನು ಹೊಂದಿರುವ ದಾನಿಯ ಅಂಡಾಣುವಿಗೆ ಜೋಡಿಸಲಾಗುತ್ತದೆ. ತಾಯಿಯ ಅಂಡಾಣು, ತಂದೆಯ ವೀರ್ಯಾಣು ಮತ್ತು ದಾನಿಯ ಅಂಡಾಣುವನ್ನು ಸೇರಿಸಿ ಐವಿಎಫ್ ವಿಧಾನದ ಮೂಲಕ ಈ ಶಿಶುವಿಗೆ ಜನ್ಮ ನೀಡಲಾಗಿದೆ. ಹೀಗೆ ಜನಿಸಿದ ಮಗುವಿನ ವ್ಯಕ್ತಿತ್ವ ಮತ್ತು ಕಣ್ಣಿನ ಬಣ್ಣಗಳಂತಹ ಪ್ರಮುಖ ಗುಣಲಕ್ಷಣಗಳು ಪೋಷಕರಿಗೆ ಹೋಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.