ತ್ರಿಪುರಾದ ವಿಧಾನಸಭೆಗೆ ಫೆಬ್ರವರಿ 16ರಂದು ಮತದಾನ ಪ್ರಕ್ರಿಯೆ ನಡೆದರೆ, ನಾಗಲ್ಯಾಂಡ್ ಮತ್ತು ಮೇಘಾಲಯದಲ್ಲಿ ಫೆಬ್ರವರಿ 27ರಂದು ಚುನಾವಣೆ ನಡೆದಿತ್ತು. ಈ ಮೂರೂ ರಾಜ್ಯಗಳಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ತ್ರಿಪುರಾ, ನಾಗಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿ ಕೂಟಕ್ಕೆ ಅಧಿಕಾರ ಸಿಕ್ಕರೆ, ಮೇಘಾಲಯದಲ್ಲಿ ಎನ್‌ಡಿಪಿಪಿಗೆ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ.
ಎಕ್ಸಿಟ್ ಪೋಲ್‌ಗಳ ಅಭಿಪ್ರಾಯದ ಪ್ರಕಾರ ತ್ರಿಪುರಾದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೇಘಾಲಯದಲ್ಲಿ ಕಡಿಮೆ ಅಂತರದಿಂದ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಂಚೂಣಿಯಲ್ಲಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಎನ್‌ಡಿಪಿಪಿ ಗೆಲುವಿನ ನಗೆ ಬೀರಲಿದೆ. ಹೀಗಿದ್ದರೂ ಎಕ್ಸಿಟ್‌ಪೋಲ್‌ಗಳ ಭವಿಷ್ಯ ತಲೆಕೆಳಗಾದರೂ ಅಚ್ಚರಿಯೇನಿಲ್ಲ.
ಮೇಘಾಲಯದಲ್ಲಿ ಬಿಜೆಪಿ ಜೊತೆಗಿನ ಐದು ವರ್ಷಗಳ ಮೈತ್ರಿಯಿಂದ ಹೊರ ಬಂದಿರುವ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಪಕ್ಷ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದೆ. ಆದರೆ ಮತ ಎಣಿಕೆಗೆ ಮುನ್ನ ನಿನ್ನೆ ತಡರಾತ್ರಿ ಗುವಾಹಟಿಯಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿರುವ ಕಾನ್ರಾಡ್ ಸಂಗ್ಮಾ ಚುನಾವಣೋತ್ತರ ಮೈತ್ರಿಯ ಸಾಧ್ಯತೆಯ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ತ್ರಿಪುರಾದಲ್ಲಿ ಬಿಜೆಪಿಯು 2018ರ ಚುನಾವಣೆಯಲ್ಲಿ ಪಡೆದ ಫಲಿತಾಂಶಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಈ ಬಾರಿ ಆಡಳಿತಾರೂಢ ಮಿತ್ರ ಪಕ್ಷ ಐಪಿಎಫ್‌ಟಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಬಿಜೆಪಿಯು ಈ ಸಲ ಮೈತ್ರಿಕೂಟದ ಸಹಾಯವಿಲ್ಲದೆ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಶಾ ಹೇಳಿದ್ದಾರೆ.
ಕಳೆದ 35 ವರ್ಷಗಳ ಕಾಲ ತ್ರಿಪುರಾ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸಿಪಿಎಂ ಪಕ್ಷ ಕಳೆದ ಚುನಾವಣೆಯಲ್ಲಿ ಮಕಾಡೆ ಮಲಗಿತ್ತು. ಆದರೆ ಈ ಬಾರಿ ತಾನು ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಎರಡೂ ಪಕ್ಷಗಳನ್ನು ಬೆಂಬಲಿಸುವ ಜನರ ಸಂಖ್ಯೆ ಕ್ಷೀಣಿಸಿದೆ. ಅದಾಗ್ಯೂ ಈ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಸಿಪಿಎಂ 47ರಲ್ಲಿ ಸ್ಪರ್ಧಿಸಿದ್ರೆ ಕಾಂಗ್ರೆಸ್ ಕೇವಲ 13 ಸ್ಥಾನಗಳಲ್ಲಿ ಕಣಕ್ಕಿಳಿದಿದೆ.