ಒಡಿಶಾದಲ್ಲಿ ಭಾರಿ ಹಾನಿ ಉಂಟು ಮಾಡಿರುವ ಫನಿ ಚಂಡಮಾರುತವು ಶುಕ್ರವಾರ ಮಧ್ಯರಾತ್ರ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು ಬೀರುಗಾಳಿ ಸಹಿತ ಭಾರಿ ಮಳೆಯಾಗಿದೆ. ಶುಕ್ರವಾರ ಕರಾವಳಿಗೆ ಅಪ್ಪಳಿದ ಫನಿ ಚಂಡಮಾರುತ ಅಪಾರ ಪ್ರಮಾಣದಲ್ಲಿ ಹಾನಿಯನ್ನು ಉಂಟು ಮಾಡಿತ್ತು. ತಾಸಿಗೆ 175 ಕಿ.ಮೀ ಗೂ ಹೆಚ್ಚು ವೇಗದ ಗಾಳಿ ಜನಜೀವನವನ್ನು ತಲ್ಲಣ ಗೊಳಿಸಿತ್ತು. ಹುಲ್ಲು ಚಾವಣಿಯ ಮನೆಗಳು ಗಾಳಿಗೆ ಹಾರಿ ಹೋಗಿವೆ. ಸುಮಾರು 15 ಪಟ್ಟಣಗಳು ಮತ್ತು ನೂರಾರು ಗ್ರಾಮಗಳು ನೀರಿನಿಂದ ಆವೃತವಾಗಿವೆ. ಕೋಲ್ಕತ್ತಾ ಮಿಡ್ನಾಪುರ ಸೇರಿದಂತೆ ಬಂಗಾಳದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಗಾಳಿಯ ಪರಿಣಾಮ ಸಾವಿರಾರು ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕೆ ಉರುಳಿವೆ.