ಚೀನಾದಲ್ಲಿ ಮೃಗಾಲಯದ ಜೊತೆಗೆ ಸಹಭಾಗಿತ್ವವುಳ್ಳ ಪ್ರಾಣಿ ಸಂತತಿ ವೃದ್ಧಿಗೆ ಒತ್ತು ನೀಡುವ ಖಾಸಗಿ ಕಂಪನಿಯೊಂದು ಒಂದು ಲಕ್ಷ ಕೋತಿಗಳಿಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಲಂಕಾ ಸರ್ಕಾರ ಒಪ್ಪಿದೆ. ಒಂದೇ ಬಾರಿಗೆ ಲಕ್ಷ ಕೋತಿಗಳನ್ನು ಹಿಡಿದು ಕಳುಹಿಸುವುದಿಲ್ಲ. ದೇಶದ ವಿವಿಧೆಡೆ ಕೋತಿಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿದೆ ಹೀಗಾಗಿ ಬೇಡಿಕೆಗೆ ಒಪ್ಪಿದ್ದೇವೆ. ಸಂರಕ್ಷಿತ ಪ್ರದೇಶದ ಕೋತಿಗಳನ್ನು ಮುಟ್ಟುವುದೂ ಇಲ್ಲ ಎಂದು ಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ಹೇಳಿದ್ದಾರೆ.
ಜೀವಂತ ಪ್ರಾಣಿಗಳನ್ನು ಸಾಗಿಸುವುದು ಶ್ರೀಲಂಕಾದಲ್ಲಿ ನಿಷೇಧಿಸಲಾಗಿದೆ. ಆದರೆ ಉಪದ್ರವಕಾರಿಯಾಗಿರುವ ಮೂರು ಪ್ರಭೇದದ ಕೋತಿ, ನವಿಲು ಹಾಗೂ ಕಾಡುಹಂದಿಗಳು ಸೇರಿದಂತೆ ಹಲವು ವನ್ಯಜೀವಿಗಳನ್ನ ಸಂರಕ್ಷಿತ ಪಟ್ಟಿಯಿಂದ ಸರ್ಕಾರ ಇತ್ತೀಚೆಗೆ ಕೈಬಿಟ್ಟಿದೆ. ಹಾಗಾಗಿ ಪಟ್ಟಿಯಿಂದ ಕೈಬಿಡಲಾದ ಪ್ರಾಣಿಗಳು ಕೃಷಿಭೂಮಿಯಲ್ಲಿ ಉಪದ್ರವ ಕೊಟ್ಟರೆ ರೈತರಿಗೆ ಅವುಗಳನ್ನು ಸಾಯಿಸಲೂ ಕೂಡ ಅನುಮತಿ ಇದೆ.