ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಶೇಷ ಜಾಕೆಟ್ ಧರಿಸಿ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬಾಟಲಿ ಮರುಬಳಕೆ ಮಾಡಿ ಸಿದ್ಧಪಡಿಸಿದ ನೀಲಿ ಬಣ್ಣದ ಸ್ಲೀವ್ಲೆಸ್ ಸದ್ರಿ ಜಾಕೆಟ್ ಧರಿಸಿ ರಾಜ್ಯಸಭೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ನಡೆದಿದ್ದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಈ ಜಾಕೆಟ್ ಅನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿತ್ತು.
ತೈಲ ಕಂಪನಿಯು ಮುಂಚೂಣಿಯ ಕಾರ್ಮಿಕರಿಗೆ ಸಮವಸ್ತ್ರಗಳನ್ನು ತಯಾರಿಸಲು 20 ಮಿಲಿಯನ್ ಹಳೆ ಪಿಇಟಿ ಬಾಟಲಿಗಳನ್ನು ಮರುಬಳಕೆ ಮಾಡಲು ನಿರ್ಧರಿಸಿದೆ. ಕಳೆದ ನವೆಂಬರ್‌ನಲ್ಲಿ 'ಅನ್‌ಬಾಟಲ್ಡ್ - ಟುವರ್ಡ್ಸ್ ಎ ಗ್ರೀನರ್ ಫ್ಯೂಚರ್ ಎಂಬ ಕಾರ್ಯಕ್ರಮ ಆರಂಭಿಸಲಾಗಿದ್ದು, ಸುಮಾರು 3 ಲಕ್ಷ ಇಂಡಿಯನ್ ಆಯಿಲ್ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ಗಳ ಅಟೆಂಡೆಂಟ್‌ಗಳು ಮತ್ತು ಇಂಡೇನ್ ಎಲ್‌ಪಿಜಿ ಗ್ಯಾಸ್ ವಿತರಣಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಸಮವಸ್ತ್ರವನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ.
ಉಪಯೋಗಿಸಿದ ಮತ್ತು ಹಳೆ ಪಿಇಟಿ ಬಾಟಲಿಗಳಿಂದ ಉಡುಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ಸುಮಾರು 405 ಟನ್‌ಗಳಷ್ಟು ಬಾಟಲಿಗಳನ್ನು ಮರುಬಳಕೆ ಮಾಡಿದಂತಾಗಲಿದೆ. ಜೊತೆಗೆ ಇದು ವಾರ್ಷಿಕವಾಗಿ 20 ಮಿಲಿಯನ್ ಬಾಟಲಿಗಳನ್ನು ಸರಿದೂಗಿಸಲು ಸಮಾನವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಈ ಜಾಕೆಟ್ ಧರಿಸಿರುವುದು ಸಾಕಷ್ಟು ಮಹತ್ವ ಪಡೆದಿದೆ ಎಂದು ಇಂಡಿಯನ್ ಆಯಿಲ್ ಅಧಿಕಾರಿಗಳು ಹೇಳಿದ್ದಾರೆ.