ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಎರಡನೇ ಚಂದ್ರಯಾನಕ್ಕೆ ದಿನಗಣನೆ ಶುರುವಾಗಿದೆ. ಇದೇ ಜುಲೈ 15 ರಂದು ಚಂದ್ರಯಾನ-2 ಯೋಜನೆಯನ್ನು ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಯೋಜನೆಯ ಭಾಗವಾಗಿರುವ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ಗಳು ಉಡಾವಣೆಗೆ ಸಜ್ಜಾಗಿವೆ. ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್ನಿಂದ ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 6 ಅಥವಾ 7 ರಂದು ಚಂದ್ರನ ಕತ್ತಲೆ ಭಾಗದಲ್ಲಿ ಲ್ಯಾಂಡರ್ ಇಳಿಯಲಿದೆ. ಹಾಲಿವುಡ್ ಸಿನಿಮಾ ಬಜೆಟ್ಗಿಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-2 ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಚಂದ್ರನ ಮೇಲಿರುವ ನೀರು, ವಾತಾವರಣ, ಖನಿಜ ಹಾಗೂ ಕಂಪನದ ಬಗ್ಗೆ ಅಧ್ಯಯನ ನಡೆಸುವುದು ಚಂದ್ರಯಾನ-2 ಯೋಜನೆಯ ಉದ್ದೇಶವಾಗಿದೆ. ಚಂದ್ರನ ಮೇಲೆ ಇಳಿಯಲಿರುವ ರೋವರ್ ಸುಮಾರು 20 ಕೆ.ಜಿ ತೂಕವಿದ್ದು, ಸೌರಶಕ್ತಿ ಮೂಲಕ ಸ್ವತಂತ್ರವಾಗಿ ಕೆಲಸ ಮಾಡಲಿದೆ. ಚಂದ್ರನಲ್ಲಿ ದೊರಕುವ ಕಲ್ಲು, ಮಣ್ಣಿನ ಮಾದರಿಯನ್ನು ಪಡೆದು ಆರ್ಬಿಟರ್ ಮೂಲಕ ಅದರ ಡೇಟಾ ಮತ್ತು ಫೋಟೋವನ್ನು ಭೂಮಿಗೆ ಕಳುಹಿಸುತ್ತದೆ. ರೋವರ್ ಸುಮಾರು 14 ದಿನಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಚಂದ್ರಯಾನ-2ರ ಉಪಗ್ರಹವನ್ನು ಹೊತ್ತೊಯ್ಯುತ್ತಿರುವ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್ನ್ನು 4 ಟನ್ ಉಪಕರಣ ಹೊರುವ ಸಾಮರ್ಥ್ಯ ಇರುವಂತೆ ವಿನ್ಯಾಸಗೊಳಿಸಲಾಗಿದೆ.