ಹಳ್ಳಿಯ ಜನರು ತಮ್ಮ ಕಷ್ಟವನ್ನಾದರೂ ಸಹಿಸಿಕೊಳ್ಳುತ್ತಾರೆ, ಆದರೆ ತಾವು ಸಾಕುವ ದನಕರುಗಳ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುತ್ತಾರೆ. ಇದೀಗ ಕಚ್ ಭಾಗದ ರೈತರು ಜಾನುವಾರಗಳಿಗೆ ಅಹಾರ-ನೀರು ಒದಗಿಸಿಕೊಡುವ ಸಲುವಾಗಿ ಮೂರು ತಿಂಗಳುಗಳ ಕಾಲ ದೊಡ್ಡ ದೊಡ್ಡ ಊರುಗಳಿಗೆ ವಲಸೆ ಹೋಗುತ್ತಾರೆ. ಸಾಮಾನ್ಯ ಕುಟುಂಬವು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದೊಡ್ಡ ನಗರಕ್ಕೆ ವಲಸೆ ಹೋಗುವಂತೆ, ಈ ಬನ್ನಿ ಪ್ರಾಂತ್ಯದ ಜಾನುವಾರು ಮಾಲೀಕರು ತಮ್ಮ ದನಕರುಗಳನ್ನು ಬದುಕಿಸಿಕೊಳ್ಳಲು ಮೂರು ತಿಂಗಳ ಕಾಲ ಬೇರೆ ಕೆಲವು ಸ್ಥಳಗಳಿಗೆ ವಲಸೆ ಹೋಗುತ್ತಾರೆ.
ಪಂಚಾಯಿತಿ ಮಾಜಿ ಅಧ್ಯಕ್ಷ ಫಕೀರಮದ್ ಜಾತ್ ಮಾತನಾಡಿ, ಗ್ರಾಮದಲ್ಲಿರುವ ಕೆರೆಗಳಲ್ಲಿ ನೀರಿನ ಮಟ್ಟ ಈಗ ಅತ್ಯಂತ ಕಡಿಮೆ ಮಟ್ಟದಲ್ಲಿದ್ದು, ಮಲಿನವಾಗಿದೆ. ಬಾವಿಯಲ್ಲಿ ಸಾಕಷ್ಟು ನೀರು ಸಿಗುತ್ತಿಲ್ಲ. ಆದರೂ ಕುಡಿಯಲು ಸಾಧ್ಯವಾಗದ ಈ ನೀರನ್ನು ಪ್ರಾಣಿಗಳಿಗೆ ಅನಿವಾರ್ಯವಾಗಿ ಕುಡಿಯಲು ಒತ್ತಾಯಿಸಲಾಗುತ್ತದೆ. ಇದರಿಂದ ಅವುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ನೀರಿನ ಕೊರತೆಯಿಂದಾಗಿ ಐದರಿಂದ ಆರು ತಿಂಗಳವರೆಗೆ ತೆನೆಯಾಗಿರುವ ಅನೇಕ ಎಮ್ಮೆಗಳು ಗರ್ಭಪಾತಕ್ಕೆ ಒಳಗಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕಚ್ನಲ್ಲಿ ಆಸ್ಪತ್ರೆಯೊಂದರ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬನ್ನಿ ಪ್ರದೇಶದ ಜಾನುವಾರು ಮಾಲೀಕರ ಸಂಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಗ್ರಾಮವನ್ನು ತೊರೆಯದಂತೆ ಮನವಿ ಮಾಡಿದ್ದರು. ಆದರೆ ಈ ಜನರು ಊರು ಬಿಡುವುದು ಅನಿವಾರ್ಯವಾಗಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ದನಕರುಗಳಿಗಾಗಿ ಊರು ಬಿಡಲೇಬೇಕು ಎಂದು ಜನರು ಅಳಲು ತೋಡಿಕೊಳ್ಳುತ್ತಾರೆ.