ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದ ಒಡಿಶಾದ ಗಜಪತಿ ಜಿಲ್ಲೆಯ ವಲಸೆ ಕಾರ್ಮಿಕನ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ಎನ್ನಲಾಗಿದ್ದ ವ್ಯಕ್ತಿ ಬದುಕಿದ್ದು, ಒಡಿಶಾ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ. ಗಜಪತಿ ಜಿಲ್ಲೆಯ ಬರಿಗಾಂವ್ ಗ್ರಾಮದ ವಲಸೆ ಕಾರ್ಮಿಕ ಶರತ್ ತನ್ನ ಹೆಂಡತಿಯಿಂದ ದೂರವಾಗಲು ತನ್ನ ನಕಲಿ ಕೊಲೆ ಕಥೆ ಎಣೆದಿದ್ದ ಎಂಬುದು ಬಯಲಾಗಿದೆ.
ಶರತ್ ಮಾಡಿದ್ದ ಈ ವಿಡಿಯೋದಿಂದ ತಮಿಳುನಾಡಿನಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಹೊಡೆದು ಕೊಲ್ಲಲಾಗಿದೆ ಎಂಬ ವದಂತಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿತ್ತು. ಕೊಲೆಯ ವದಂತಿಯನ್ನು ಹರಡುವ ಮೂಲಕ ಆಡಳಿತವನ್ನು ತೊಂದರೆಗೆ ಸಿಲುಕಿಸಿದ್ದರಿಂದ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ನಂತರ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.