ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವ. ನನಗೆ ರಕ್ತ ಕೊಡಿ, ನಿಮಗೆ ನಾನು ಸ್ವಾತಂತ್ರ್ಯ ಕೊಡಿಸುತ್ತೇನೆ ಘೋಷವಾಕ್ಯದೊಂದಿಗೆ ಬ್ರಿಟಿಷರ ಪಾಲಿಗೆ ಸುಭಾಷ್ಚಂದ್ರ ಬೋಸ್ ಅಕ್ಷರಶಃ ಸಿಂಹಸ್ವಪ್ನವಾಗಿದ್ದರು. ಶತ್ರುವಿನ ಶತ್ರು ನನ್ನ ಮಿತ್ರ ಎಂದು ಬ್ರಿಟಿಷರನ್ನು ನಡುಗಿಸಿದ್ದ ನೇತಾಜಿ ಸಶಕ್ತ, ಸಮರ್ಥ, ಸದೃಢ ಭಾರತ ಕಟ್ಟುವ ಕನಸು ಕಂಡಿದ್ದರು. ಇದಕ್ಕಾಗಿಯೇ 1943ರಲ್ಲಿ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿ ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದರು. ಅಷ್ಟೇ ಅಲ್ಲದೆ ತಮ್ಮದೆಯಾದ ಕರೆನ್ಸಿ ನೋಟುಗಳನ್ನು ಜಾರಿಗೆ ತಂದಿದ್ದರು. ಆದರೆ ಇದೆಲ್ಲವೂ ಅಪ್ರತಿಮ ದೇಶ ಪ್ರೇಮಿಯ ಸಾವಿನ ರಹಸ್ಯದಂತೆ ತೆರೆ ಮರೆಯಲ್ಲಿ ಉಳಿದದ್ದು ನಮ್ಮ ದೇಶದ ದೌರ್ಭಾಗ್ಯ. ನೇತಾಜಿ ಅವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಅವರ ಕೆಲ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದೆ.
ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಪೂರ್ವವೇ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದರು. 1943ರ ಅಕ್ಟೋಬರ್ 21ರಂದು ಸಿಂಗಾಪುರದ 'ಕ್ಯಾಥೇ' ಕಟ್ಟಡದ ಮುಂಭಾಗದಲ್ಲಿ ನೇತಾಜಿ ಅವಿಭಜಿತ ಭಾರತದ ತಾತ್ಕಾಲಿಕ ಸರ್ಕಾರದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದರೆ ನಂಬಲೇಬೇಕು. ಇದರೊಂದಿಗೆ ಆಜಾದ್ ಹಿಂದ್ ಬ್ಯಾಂಕ್ ಅನ್ನು ಸ್ಥಾಪಿಸಿ, ಸರ್ಕಾರದ ಅಧಿಕೃತ ಕರೆನ್ಸಿಗಳನ್ನು ಚಲಾವಣೆಗೆ ತಂದಿದ್ದರು. ನೇತಾಜಿ ಅವರ ಕಾರು ಚಾಲಕ ಕರ್ನಲ್ ನಿಜಾಮುದ್ದೀನ್ ಈ ಹಿಂದೆ ಆಜಾದ್ ಹಿಂದ್ ಸರ್ಕಾರದ ಕೆಲ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಒಂದು ಸರ್ಕಾರ ಸ್ಥಾಪಿಸುವುದು ಕೇವಲ ಬಾಯಿ ಮಾತಾಗಿರಲಿಲ್ಲ. ಬ್ರಿಟಿಷರನ್ನು ಎದುರಾಕಿಕೊಂಡು ನೇತಾಜಿ ಸ್ಥಾಪಿಸಿದ ಸರ್ಕಾರವನ್ನು ಹತ್ತು ರಾಷ್ಟ್ರಗಳೂ ಕೂಡ ಬೆಂಬಲಿಸಿತ್ತು. ಅಂದರೆ ಭಾರತದ ಸ್ವಾತಂತ್ರ್ಯಕ್ಕಾಗಿ ಸುಭಾಷ್ಚಂದ್ರ ಬೋಸ್ ಅವರ ಹೋರಾಟ ಯಾವ ಮಟ್ಟದಲ್ಲಿತ್ತು ಎಂಬುದನ್ನು ಊಹಿಸಿಕೊಳ್ಳಬಹುದು.
1943 ರಲ್ಲಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಆಜಾದ್ ಹಿಂದ್ ಬ್ಯಾಂಕನ್ನು ಹಲವು ದೇಶಗಳು ಬೆಂಬಲಿಸಿದ್ದವು. ಈ ಸಂದರ್ಭದಲ್ಲಿ ಹತ್ತು ರೂಪಾಯಿಯ ನಾಣ್ಯದಿಂದ ಹಿಡಿದು 1 ಲಕ್ಷದವರೆಗಿನ ನೋಟುಗಳನ್ನು ಈ ಬ್ಯಾಂಕ್ ಜಾರಿಗೊಳಿಸಿತ್ತು. ನೇತಾಜಿ ಅವರ ಭಾವಚಿತ್ರದೊಂದಿಗೆ ಮೂಡಿ ಬಂದಿದ್ದ ಈ ಕರೆನ್ಸಿಗಳನ್ನು ಬರ್ಮಾ, ಕ್ರೊಸಿಯಾ, ಜರ್ಮನಿ, ನಾನ್ಕಿಂಗ್(ಈಗಿನ ಚೀನಾ), ಮಂಚುಕೊ, ಇಟಲಿ, ಥಾಯ್ಲೆಂಡ್, ಫಿಲಿಪೈನ್ಸ್ ಮತ್ತು ಐರ್ಲೆಂಡ್ ದೇಶಗಳು ಭಾರತದ ಅಧಿಕೃತ ಕರೆನ್ಸಿ ಎಂದು ಒಪ್ಪಿಕೊಂಡಿದ್ದರು.
ನೇತಾಜಿ ಅವರ ಸೇನೆಯಲ್ಲಿ ವೇತನವನ್ನು ಕೂಡ ನೀಡಲಾಗುತ್ತಿತ್ತು. ಸುಭಾಷ್ ಚಂದ್ರ ಬೋಸ್ ಅವರ ಅಂಗರಕ್ಷಕ ಕರ್ನಲ್ ನಿಜಾಮುದ್ದೀನ್ ಅವರಿಗೆ ಈ ಸಂದರ್ಭದಲ್ಲಿ 17 ರೂ. ವೇತನ ನೀಡಲಾಗುತ್ತಿತ್ತು ಎಂದು ಹಿಂದೊಮ್ಮೆ ಅವರು ತಿಳಿಸಿದ್ದರು. ಅದೇ ರೀತಿ ಐಎನ್ಎ ಲೆಫ್ಟಿನೆಂಟ್ ಅಧಿಕಾರಿಗಳಿಗೆ 80 ರೂ. ಸಂಬಳ ಕೊಡಲಾಗುತ್ತಿತ್ತು. ಇನ್ನು ಹೊರ ದೇಶಗಳಲ್ಲಿ ಅಂದರೆ ಬರ್ಮಾದಲ್ಲಿ ಆಜಾದ್ ಹಿಂದ್ ಫೌಜ್ ಅನ್ನು ಮುನ್ನೆಡೆಸುತ್ತಿದ್ದ ಅಧಿಕಾರಿಗಳಿಗೆ 230 ರೂ. ವೇತನ ನೀಡುತ್ತಿದ್ದರು.
ನೇತಾಜಿ ಕಟ್ಟಿದ್ದ ಸೇನೆಯಲ್ಲಿ ಗುಪ್ತಚರ ಇಲಾಖೆ ಕೂಡ ಇತ್ತು ಎಂಬುದೇ ಹೆಮ್ಮೆಯ ವಿಷಯ.ಇವರು ಭಾರತದ ಮೂಲೆ ಮೂಲೆಯಲ್ಲಿ ನಿಂತು ಬ್ರಿಟಿಷ್ ಸರ್ಕಾರದ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ಪ್ರೊ. ಶ್ರೀವಾಸ್ತವ್ ಪ್ರಕಾರ, ನೇತಾಜಿ ಅವರ ಗುಪ್ತಚರ ಇಲಾಖೆ ಎಷ್ಟು ಬಲಿಷ್ಠವಾಗಿತ್ತು ಎಂದರೆ ಸಿಂಗಾಪುರ ಮತ್ತು ಬ್ಯಾಂಕಾಂಗ್ಗಳಲ್ಲೂ ಇದರ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ಬ್ರಿಟೀಷ್ ಸೈನ್ಯದ ಪ್ರತಿಯೊಂದು ಹಾಗುಹೋಗುಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಈ ರೀತಿಯಾಗಿ ಜಪಾನ್ ಸೈನ್ಯದ ಸಹಾಯದೊಂದಿಗೆ ಕೆಚ್ಚೆದೆಯಿಂದ ಯುದ್ಧ ಮಾಡಿ ಕೊಹಿಮಾ, ಧಿಮಾಪುರ, ಮೊಯಿರಾಂಗ್, ವಿಷ್ಣುಪುರ ಮುಂತಾದ ಪ್ರದೇಶಗಳಲ್ಲಿ ಬ್ರಿಟಿಷ್ ಸೈನ್ಯಕ್ಕೆ ಮಣ್ಣು ಮುಕ್ಕಿಸಿ ಆಜಾದ್ ಹಿಂದ್ ಸರ್ಕಾರದ ಆಡಳಿತ ನಡೆಸಿತ್ತು.