ಅಂದಹಾಗೆ ಈ ರೋಗಕ್ಕೆ ತುತ್ತಾದವರ ಪೈಕಿ 97% ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳುತ್ತಿದ್ದು, 1962-2021ರ ತನಕ ಅಮೆರಿಕಾದಲ್ಲಿ ಒಟ್ಟು 154 ಮಂದಿ ಈ ರೋಗಕ್ಕೆ ಗುರಿಯಾಗಿದ್ದರು. ಆ ಪೈಕಿ ಕೇವಲ ನಾಲ್ಕು ರೋಗಿಗಳು ಮಾತ್ರ ಬದುಕುಳಿದಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಮಾಧ್ಯಮಗಳ ವರದಿ ಪ್ರಕಾರ, ಈಗ ಈ ಕಾಯಿಲೆಯಿಂದ ಸತ್ತಿರುವ ಫ್ಲೋರಿಡಾದ ವ್ಯಕ್ತಿಯ ಪ್ರಕರಣವು ಅಮೆರಿಕಾದಲ್ಲಿ ಚಳಿಗಾಲಕ್ಕೆ ಮೊದಲು ಸಂಭವಿಸಿದ ಮೊದಲ ಪ್ರಕರಣ ಆಗಿದೆ ಎಂದು ತಿಳಿದು ಬಂದಿದೆ.
ನೆಗ್ಲೇರಿಯಾ ಫೌಲೆರಿ ಸೋಂಕು ಅತ್ಯಂತ ಅಪರೂಪವಾಗಿದ್ದು, ಇದು ಕಲುಷಿತಗೊಂಡ ನೀರನ್ನು ಬಳಸುವುದರಿಂದ ಅದರಲ್ಲಿದ್ದ ಅಮೀಬಾ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಮಾತ್ರ ಸಂಭವಿಸುತ್ತದೆ ಎಂದು ಫ್ಲೋರಿಡಾ ಆರೋಗ್ಯ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ. ಅಚ್ಚರಿಯ ವಿಷಯ ಅಂದ್ರೆ ಕಲುಷಿತ ನೀರು ಕುಡಿಯುವುದರಿಂದ ವ್ಯಕ್ತಿಗೆ ಸೋಂಕು ತಗುಲುವುದಿಲ್ಲ, ಆದರೆ ಆ ನೀರು ಮೂಗಿಗೆ ಪ್ರವೇಶಿಸಿದಾಗ ಮಾತ್ರ ಸೋಂಕು ದೇಹ ಪ್ರವೇಶಿಸುತ್ತದೆ. ಇನ್ನು ಇದು ಉಪ್ಪು ನೀರಿನಲ್ಲಿ ಕಂಡುಬರುವುದಿಲ್ಲ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ.
ನೆಗ್ಲೇರಿಯಾ ಫೌಲೆರಿಗೆ ಕಾಯಿಲೆಗೆ ಔಷಧ ಇದೆಯೇ?: ಇನ್ನು ಈ ಕಾಯಿಲೆಯನ್ನು ತಡೆಗಟ್ಟಲು ಕೆಲವು ಚಿಕಿತ್ಸೆ, ಔಷಧಗಳನ್ನು ನೀಡಿ ನಿಯಂತ್ರಿಸಬಹುದಾದರೂ, ದೀರ್ಘಕಾಲೀನ ಪರಿಣಾಮಕಾರಿ ಚಿಕಿತ್ಸೆಯನ್ನು ಇನ್ನೂ ಕಂಡುಹುಡುಕಿಲ್ಲ. ಸದ್ಯ, PAM ಅನ್ನು ಆಂಫೋಟೆರಿಸಿನ್ ಬಿ, ಅಜಿಥ್ರೊಮೈಸಿನ್, ಫ್ಲುಕೋನಜೋಲ್, ರಿಫಾಂಪಿನ್, ಮಿಲ್ಟೆಫೋಸಿನ್ ಮತ್ತು ಡೆಕ್ಸಾಮೆಥಾಸೊನ್ ಸೇರಿದಂತೆ ಇತರ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.