ತನ್ನೊಂದಿಗೆ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನು ಆಕೆಯ ಪತಿ ಮತ್ತು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾನೆ. ಈ ಸಂಬಂಧ ಹೇಗೆ ಸಾಧ್ಯ ಎಂದು ಕೇಳಿದರೆ, ನಾವಿಬ್ಬರು ಸಹಜೀವನ ಹೊಂದಿದ್ದು, ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ ಎಂದು ಉತ್ತರಿಸಿದ್ದಾನೆ. ಈ ವಿಚಿತ್ರ ಪ್ರಕರಣಕ್ಕೆ ಕೋರ್ಟ್ ಮಹತ್ವ ತೀರ್ಪು ನೀಡಿದೆ.
ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ. ಆ ಮಹಿಳೆ ಈ ಹಿಂದೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಆದರೆ ಪತಿಯೊಂದಿಗಿನ ಭಿನ್ನಾಭಿಪ್ರಾಯದಿಂದಾ ಕುಟುಂಬದಿಂದ ದೂರವಾಗಿದ್ದಳು. ನಂತರ ಅರ್ಜಿದಾರನ ಜೊತೆ ಸಹಬಾಳ್ವೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡು ವಾಸಮಾಡುತ್ತಿದ್ದಳು. ಹೀಗಿರುವಾಗ ಕೆಲವು ದಿನಗಳ ನಂತರ ಮಹಿಳೆಯ ಕುಟುಂಬಸ್ಥರು ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಆಕೆಯ ಗೆಳೆಯ ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಗುಜರಾತ್ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ನ್ಯಾಯಮೂರ್ತಿ ವಿಎಂ ಪಾಂಚೋಲಿ ಮತ್ತು ನ್ಯಾಯಮೂರ್ತಿ ಪ್ರಚಕ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಈ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಯಾವುದೇ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪತ್ನಿ ಪತಿಯೊಂದಿಗೆ ಇರುವುದು ಅಕ್ರಮ ಬಂಧನಕ್ಕೆ ಬರುವುದಿಲ್ಲ ಎಂದು ತೀರ್ಪು ನೀಡಿದೆ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿ ಇಬ್ಬರೂ ವಿಚ್ಛೇದನ ಪಡೆದಿಲ್ಲ ಎಂದು ಕೋರ್ಟ್ ಹೇಳಿದೆ.