ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ನಡೆಯುವ ಫೈರಿಂಗ್ ಹಾಗೂ ಬಾಂಬ್ ಸದ್ದು ಜನರ ನಿದ್ದೆಗೆಡಿಸಿರುವುದೇನೋ ನಿಜ. ಆದರೆ ಇಂದು ದೇಶದ ಬಹುದೊಡ್ಡ ಕಂಪೆನಿಗಳಲ್ಲೊಂದಾದ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಅಡಿಪಾಯವನ್ನು ಇಬ್ಬರು ಅಮರ ಸ್ನೇಹಿಗಳು ಹಾಕಿದ್ದರೆಂಬ ವಿಚಾರ ಮಾತ್ರ ಯಾರಿಗೂ ತಿಳಿದಿಲ್ಲ. ಅದರಲ್ಲೂ ಈ ಇಬ್ಬರು ಗೆಳೆಯರಲ್ಲಿ ಒಬ್ಬರು ಭಾರತೀಯರಾಗಿದ್ದರೆ ಮತ್ತೊಬ್ಬರು ಪಾಕಿಸ್ತಾನದ ಪ್ರಜೆ ಎಂಬುವುದು ಮತ್ತೂ ಅಚ್ಚರಿ ಮೂಡಿಸುವ ವಿಚಾರವಾಗಿದೆ. ಗೆಳೆಯರ ದಿನವಾದ ಇಂದು ನ್ಯೂಸ್ 18 ಕನ್ನಡವು ಇದೇ ಗೆಳೆಯರು ಆರಂಭಿಸಿದ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಗೆ ಸಂಬಂಧಿಸಿದ ಕೆಲ ರೋಚಕ ವಿಚಾರಗಳನ್ನು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ.
ಭಾರತ ವಿಭಜನೆಯಾಗುವ ಮೊದಲು ಅಂದರೆ 1945 ರಲ್ಲಿ ಲೂದಿಯಾನಾದ ಇಬ್ಬರು ಸಹೋದರರು ಕೆ. ಸಿ ಮಹೀಂದ್ರ ಹಾಗೂ ಜೆ. ಸಿ. ಮಹೀಂದ್ರರವರು ಮಲಿಕ್ ಗುಲಾಂ ಮೊಹಮ್ಮದ್ರೊಂದಿಗೆ ಸೇರಿ ಮಹೀಂದ್ರ ಆ್ಯಂಡ್ ಮೊಹಮ್ಮದ್ ಎಂಬ ಕಂಪೆನಿಗೆ ಅಡಿಪಾಯ ಹಾಕಿದ್ದರು. ಭಾರತದ ಸ್ವಾತಂತ್ರ್ಯ ಹಾಗೂ ಪಾಕಿಸ್ತಾನ ವಿಭಜನೆಯಾದ ಬಳಿಕ ಗುಲಾಂ ಮೊಹಮ್ಮದ್ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಮೊದಲ ಹಣಕಾಸು ಸಚಿವರಾದರು. 1948 ರಲ್ಲಿ ಈ ಕಂಪೆನಿಯ ಹೆಸರನ್ನು ಬದಲಾಯಿಸಿ ಮಹೀಂದ್ರ ಆ್ಯಂಡ್ ಮಹೀಂದ್ರ ಎಂದು ಮರು ನಾಮಕರಣ ಮಾಡಲಾಯಿತು.
ಇಂಡೋ-ಪಾಕ್ ವಿಭಜನೆಯೊಂದಿಗೆ ದೂರವಾದ ಗೆಳೆಯರು: ಮಹೀಂದ್ರ ಆ್ಯಂಡ್ ಮೊಹಮ್ಮದ್ ಕಂಪೆನಿಯನ್ನು ಭಾರತದ ಉತ್ಕೃಷ್ಟ ಸ್ಟೀಲ್ ಕಂಪೆನಿಯನ್ನಾಗಿಸುವುದು ಮಹೀಂದ್ರ ಸಹೋದರರು ಹಾಗೂ ಮೊಹಮ್ಮದ್ರವರ ಕನಸಾಗಿತ್ತು. ಆದರೆ 1947 ರ ಆಗಸ್ಟ್ 15 ರಂದು ದೇಶವನ್ನು ಧರ್ಮದ ಆಧಾರದಲ್ಲಿ ಎರಡು ಭಾಗಗಳನ್ನಾಗಿ ವಿಭಜಿಸಿದಾಗ ಈ ಕಂಪೆನಿಯ ಹಿಂದೂ-ಮುಸಲ್ಮಾನ ಗೆಳೆಯರೂ ದೂರವಾದರು. ಗುಲಾಂ ಮೊಹಮ್ಮದ್ ಈ ಗ್ರೂಪ್ನಿಂದ ದೂರವಾಗಿ ಪಾಕಿಸ್ತಾನಕ್ಕೆ ಹೋದರೆ ಇತ್ತ ಮಹೀಂದ್ರ ಸಹೋದರರು ಕಂಪೆನಿಯನ್ನು ಏಕಾಂಗಿಯಾಗಿ ಭಾರತದಲ್ಲಿ ಮುಂದುವರೆಸಲು ನಿರ್ಧರಿಸಿದರು.
ಬದಲಾಯ್ತು ಉದ್ಯಮದ ರಣತಂತ್ರ: ಹೆಸರು ಬದಲಾಯಿಸಿದ ಬಳಿಕ ಮಹೀಂದ್ರ ಸಹೋದರರು ಆಟೋ ಇಂಡಸ್ಟ್ರಿಗೆ ಕಾಲಡಲು ನಿರ್ಧರಿಸಿದರು. ವಾಸ್ತವವಾಗಿ ಅಮೆರಿಕಾ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ಕೆ. ಸಿ ಮಹೀಂದ್ರ ಅಲ್ಲಿ ಜೀಪನ್ನು ನೋಡಿದ್ದರು. ಇದಾದ ಬಳಿಕವೇ ಅವರು ಭಾರತದಲ್ಲಿ ಜೀಪ್ ನಿರ್ಮಿಸುವ ಕನಸು ಕಂಡಿದ್ದರು ಹಾಗೂ ಈ ಕನಸನ್ನು ನನಸಾಗಿಸಲು ಕಂಪೆನಿಯು ಭಾರತದಲ್ಲಿ ಜೀಪ್ ಪ್ರೊಡಕ್ಷನ್ ಆರಂಭಿಸಿದರು. ಕೆಲ ಸಮಯದ ಬಳಿಕ ಲೈಟ್ ಕಮರ್ಷಿಯಲ್ ವಾಹನ ಹಾಗೂ ಟ್ರ್ಯಾಕ್ಟರ್ ನಿರ್ಮಿಸಲಾರಂಭಿಸದರು. ಇದಾದ ಬಳಿಕ ನಿಧಾನವಾಗಿ ಅದರ ಪ್ರಯಾಣ ಅಭಿವೃದ್ಧಿಯತ್ತ ಸಾಗಿತು.
ಪಾಕಿಸ್ತಾನದ ಮೊದಲ ಹಣಕಾಸು ಸಚಿವರಾದ ಗುಲಾಂ ಮೊಹಮ್ಮದ್: ಮಲಿಕ್ ಗುಲಾಂ ಮೊಹಮ್ಮದ್ ಪಂಜಾಬ್ನ ಮಧ್ಯಮ ವರ್ಗದವರಾಗಿದ್ದರು. ಅವರು ಆಲೀಘಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದರು. ಇದಾದ ಬಳಿಕ ಅವರು ಇಂಡಿಯನ್ ಅಕೌಂಟ್ ಸರ್ವಿಸ್ನಲ್ಲಿ ಕೆಲಸ ಆರಂಭಿಸಿದರು. ಇದಾದ ಬಳಿಕ ಅವರು ಹೈದರಾಬಾದ್ ನಿಜಾಮರ ಬಳಿ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ವಿಭಜನೆ ಬಳಿಕ ಪಾಕಿಸ್ತಾನಕ್ಕೆ ತೆರಳಿದ ಅವರು ಅಲ್ಲಿನ ಮೊದಲ ಹಣಕಾಸು ಸಚಿವರಾದರು. ಇಷ್ಟೇ ಅಲ್ಲದೇ, ಲಿಯಾಕತ್ ಅಲಿಯವರ ಹತ್ಯೆ ಬಳಿಕ ಅವರು ಪಾಕಿಸ್ತಾನದ ಮೂರನೇ ಜನರಲ್ ಗವರ್ನರ್ ಕೂಡಾ ಆದರು.
ಮಹೀಂದ್ರ ಕಂಪೆನಿಗೆ ಮಹತ್ವಪೂರ್ಣವಾದ 1991: ಭಾರತೀಯ ಅರ್ಥ ವ್ಯವಸ್ಥೆ ಹಾಗೂ ಮಹೀಂದ್ರ ಗ್ರೂಪ್ ಎರಡಕ್ಕೂ 1991 ಬಹಳಷ್ಟು ಮಹತ್ವಪೂರ್ಣವಾಗಿತ್ತು. ಇದೇ ವರ್ಷದಲ್ಲಿ ಭಾರತವು ಜಾಗತೀಕರಣವನ್ನು ಒಪ್ಪಿಕೊಂಡಿದ್ದು, ಮಾರುಕಟ್ಟೆಯು ಶೀಘ್ರವಾಗಿ ಅಭಿವೃದ್ಧಿ ಕಾಣಲಾರಂಭಿಸಿತು. 1991ರಲ್ಲಿ ಆನಂದ್ ಮಹೀಂದ್ರ ಗ್ರೂಪ್ಉಪ ನಿರ್ದೇಶಕರಾದೆರು. ಕಳೆದ 24 ವರ್ಷಗಳಲ್ಲಿ ಭಾರತೀಯ ಅರ್ಥ ವ್ಯವಸ್ಥೆಯಂತೆ ಮಹೀಂದ್ರ ಗ್ರೂಪ್ ಕೂಡಾ ಯಶಸ್ಸಿನ ಉತ್ತುಂಗದಲ್ಲಿದೆ.
ಟ್ರ್ಯಾಕ್ಟರ್ನಿಂದ ಸಾಫ್ಟ್ವೇರ್ಗೂ ತಲುಪಿದ ಉದ್ಯಮ: ಇಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಉದ್ಯಮವು ಟ್ರ್ಯಾಕ್ಟರ್ನಿಂದ ಸಾಫ್ಟ್ವೇರ್ ಕ್ಷೇತ್ರದವರೆಗೂ ತಲುಪಿದೆ. ಗ್ರೂಪ್ನ ಈ ಯಶಸ್ಸಿನ ಹಿಂದೆ ಆನಂದ್ ಮಹೀಂದ್ರರವರ ಕಠಿಣ ಪರಿಶ್ರಮವಿದೆ. ಇಂದು ಅವರು ಮಹೀಂದ್ರ ಗ್ರೂಪ್ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 63 ವರ್ಷದ ಆನಂದ್ ಮಹೀಂದ್ರ 1997ರಲ್ಲಿ ಮಹೀಂದ್ರ ಗ್ರೂಪ್ನ ಎಂಡಿ ಆದರು
ಈ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ ಮಹೀಂದ್ರ ಗ್ರೂಪ್: ಇಂದು ಮಹೀಂದ್ರ ಗ್ರೂಪ್ ರಿಯಲ್ ಎಱಸ್ಟೇಟ್, ಹಾಲಿಡೇ ರೆಸಾರ್ಟ್, ರೀಟೆಲ್, ಡಿಫೆಂನ್ಸ್, ಏಜೆನ್ಸಿ, ಫೈನಾನ್ಶಿಯಲ್ ಸರ್ವೀಸಸ್, ಏವೀಯೇಶನ್ ಸೇರಿದಂತೆ ಹಲವರು ಇತರ ಉದ್ಯಮಗಳಲ್ಲಿ ತನ್ನ ಛಾಪು ಮೂಡಿಸಿದೆ. ಗ್ರೂಪ್ನ ವಾರ್ಷಿಕ ಆದಾಯ 93 ಕೋಟಿಗೂ ಅಧಿಕವಿದೆ. ಗ್ರೂಪ್ನ ಕಂಪೆನಿಯ ಸಂಖ್ಯೆಗಳು ಒಂದು ಡಜನ್ಗಿಂತಲೂ ಅಧಿಕವಿದೆ.