ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನಿರಂತರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು. ನ್ಯಾಯಮೂರ್ತಿಗಳ ನೇಮಕಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸುವವರೆಗೆ ಪ್ರಕರಣಗಳು ಬಾಕಿ ಉಳಿಯುವ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಹೇಳಿದ್ದರು.
ನ್ಯಾಯಾಂಗ ಮತ್ತು ಕೊಲಿಜಿಯಂ ಬಗ್ಗೆ ನೀಡಲಾದ ಹೇಳಿಕೆಗಳ ಸಂಬಂಧ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ದೂರಿದ್ದರು. ಇದೀಗ ಈ ಮಧ್ಯೆಯೆ ಕೇಂದ್ರ ಸರ್ಕಾರ ಕ್ಯಾಬಿನೆಟ್ ಪುನರ್‌ರಚನೆ ಮಾಡಿದ್ದು, ಕಿರಣ್ ರಿಜಿಜು ಅವರನ್ನು ಕಾನೂನು ಸಚಿವಸ್ಥಾನದಿಂದ ಬದಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.