ಕೈಲಾಸ ದೇಶವನ್ನು ನಿತ್ಯಾನಂದ ಪ್ರಬುದ್ಧ ಹಿಂದೂ ನಾಗರಿಕ ರಾಷ್ಟ್ರ ಎಂದು ಕರೆದುಕೊಂಡಿದ್ದಾನೆ. ಆದರೆ ಕೈಲಾಸವನ್ನು ದೇಶವೆಂದು ಪರಿಗಣನೆ ಮಾಡುವುದಿಲ್ಲ ಎಂದಿರುವ ವಿಶ್ವಸಂಸ್ಥೆ ಅದನ್ನು ಕಾಲ್ಪನಿಕ ದೇಶ ಎಂದು ಹೇಳಿದೆ. ವಿಚಿತ್ರವೆಂದರೆ ಈ ರೀತಿ ಸ್ವಯಂಘೋಷಿತ ದೇಶವನ್ನು ನಿರ್ಮಿಸಿರುವವರಲ್ಲಿ ನಿತ್ಯಾನಂದ ಮೊದಲಿಗನೇನಲ್ಲ. ಈ ಹಿಂದೆ ಇಂತಹ ಅನೇಕ ಸ್ವಘೋಷಿತ ರಾಷ್ಟ್ರಗಳು ನಿರ್ಮಾಣವಾಗಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ
ರಿಪಬ್ಲಿಕ್ ಆಫ್ ಮೊಲೋಸಿಯಾ: ನಿತ್ಯಾನಂದನ ರೀತಿಯಲ್ಲಿಯೇ ಕೆವಿನ್ ಬಾಗ್ ಎನ್ನುವ ವ್ಯಕ್ತಿ ರಿಪಬ್ಲಿಕ್ ಆಫ್ ಮೊಲೋಸಿಯಾ ಹೆಸರಿನ ಸ್ವಯಂಘೋಷಿತ ದೇಶವನ್ನು ಕಟ್ಟಿದ್ದಾರೆ. ಅಮೆರಿಕಾದ ನೆವಡಾ ಬಳಿ ಈ ದೇಶವಿದ್ದು, ಇಲ್ಲಿ 30 ಜನ ಮನುಷ್ಯರು, 4 ನಾಯಿಗಳು ಸೇರಿದಂತೆ 34 ಇತರ ಪ್ರಬೇಧಗಳು ಈ ದೇಶದ ಮಿತಿಯಲ್ಲಿ ವಾಸ ಮಾಡುತ್ತಿವೆ. ಈ ದೇಶವೂ ಕೂಡ ತನ್ನದೇ ಆದ ಕರೆನ್ಸಿ ಹೊಂದಿದೆ. ಇಲ್ಲಿ ನಾಯಿಗಳಿಗೂ ಪೌರತ್ವ ನೀಡಲಾಗುತ್ತದೆ.
ಲಿಬರ್ಲ್ಯಾಂಡ್ : 2015 ರಲ್ಲಿ ಜೆಕ್ ರಾಜಕಾರಣಿ ಮತ್ತು ಕಾರ್ಯಕರ್ತ ವಿಟ್ ಜೆಡ್ಲಿಕಾ ಈ ದೇಶವನ್ನು ಸ್ಥಾಪಿಸಿದ ಎಂದು ನಂಬಲಾಗಿದೆ. ಕೈಲಾಸದಂತೆ, ಲಿಬರ್‌ಲ್ಯಾಂಡ್ ತನ್ನದೇ ಆದ ವೆಬ್‌ಸೈಟ್ ಅನ್ನು ಹೊಂದಿದೆ. ಇದು ಕ್ರೊಯೇಷಿಯಾ ಮತ್ತು ಸರ್ಬಿಯಾ ನಡುವಿನ ಸಿಗಾ ಎಂಬಲ್ಲಿದೆ. ಲಿಬರ್‌ಲ್ಯಾಂಡ್‌ನಲ್ಲಿ ಇಬ್ಬರು ಉಪಾಧ್ಯಕ್ಷರು ಮತ್ತು ಐದು ಮಂತ್ರಿಗಳು ಇದ್ದಾರೆ ಮತ್ತು ಇಲ್ಲಿನ ಭಾಷೆ ಇಂಗ್ಲಿಷ್ ಎಂದು ವೆಬ್‌ಸೈಟ್ ತಿಳಿಸಿದೆ. ಈ ದೇಶದಲ್ಲಿ 2.5 ಲಕ್ಷ ಜನರಿದ್ದಾರೆ.
ಸೀಲ್ಯಾಂಡ್ : ಈ ದೇಶ ಇಂಗ್ಲೆಂಡ್ ಕರಾವಳಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ರಫ್ಸ್ ಟವರ್ ಎಂದು ಕರೆಯಲ್ಪಡುವ ಈ ಕೋಟೆಯನ್ನು ಬ್ರಿಟೀಷರು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಿರ್ಮಿಸಿದರು. ಆದರೆ ಯುದ್ಧ ಕೊನೆಗೊಂಡ ಕೆಲವು ವರ್ಷಗಳ ನಂತರ ಇದನ್ನು ಕೈಬಿಡಲಾಯಿತು. ನಂತರ ಇದನ್ನು ರಾಯ್ ಬೇಟ್ಸ್ ಎಂಬಾತ ಆಕ್ರಮಿಸಿಕೊಂಡನು. ನಂತರ ಆತ ಇದನ್ನು ಸೀಲ್ಯಾಂಡ್ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದನು. ವರದಿಗಳ ಪ್ರಕಾರ ಸೀಲ್ಯಾಂಡ್‌ನಲ್ಲಿ 70 ಜನ ವಾಸಿಸುತ್ತಿದ್ದಾರೆ.
ಗ್ಲೇಸಿಯರ್ ಗಣರಾಜ್ಯ: 2014ರಲ್ಲಿ ಗ್ರೀನ್‌ಪೀಸ್ ಪರಿಸರ ಕಾರ್ಯಕರ್ತರು ಚಿಲಿ ಮತ್ತು ಅರ್ಜೆಂಟೀನಾ ನಡುವಿನ ಖಾಲಿ ಪ್ರದೇಶದಲ್ಲಿ ಗ್ಲೇಸಿಯರ್ ಗಣರಾಜ್ಯ ಎಂಬ ಪ್ರತ್ಯೇಕ ದೇಶವನ್ನು ಕಟ್ಟಿಕೊಂಡಿದ್ದಾರೆ. ರಿಪಬ್ಲಿಕ್ ಕಾ ಗ್ಲೇಸಿಯರ್ ಒಂದು ಲಕ್ಷ ಜನಸಂಖ್ಯೆ ಹೊಂದಿದ್ದು, ಅಲ್ಲಿ ವಾಸಿಸುವ ನಾಗರಿಕರು ತಮ್ಮದೇ ಆದ ಪಾಸ್‌ಪೋರ್ಟ್ ಹೊಂದಿದ್ದಾರೆ. ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಇಲ್ಲಿನ ಪೌರತ್ವ ಪಡೆದುಕೊಳ್ಳಬಹುದು.
ಸ್ನೇಕ್ ಹಿಲ್‌ನ ಪ್ರಿನ್ಸಿಪಾಲಿಟಿ: ಕೆಲವು ಆಸ್ಟ್ರೇಲಿಯನ್ ನಿವಾಸಿಗಳು ತೆರಿಗೆ ಪಾವತಿಸಲು ಸಾಧ್ಯವಾಗದೆ ರಾಷ್ಟ್ರದಿಂದ ಬೇರ್ಪಡಲು ನಿರ್ಧರಿಸಿ, ಸ್ನೇಕ್ ಹಿಲ್ ಪ್ರಿನ್ಸಿಪಾಲಿಟಿ ಎಂಬ ತಮ್ಮದೇ ದೇಶವನ್ನು 2003 ರಲ್ಲಿ ಸ್ಥಾಪಿಸಿಕೊಂಡರು. ಈ ದೇಶ 100 ನಾಗರಿಕರನ್ನು ಹೊಂದಿದೆ. ರಾಜಕುಮಾರಿ ಹೆಲೆನಾ ಸ್ನೇಕ್ ಹಿಲ್‌ನ ರಾಜ್ಯದ ಮುಖ್ಯಸ್ಥೆ, ಅವರು ತಮ್ಮ ಪತಿ ಪ್ರಿನ್ಸ್ ಪಾಲ್ ಅವರ ಮರಣದ ನಂತರ ಸಿಂಹಾಸನಕ್ಕೇರಿದ್ದಾರೆ.
ರಜನೀಶ್‌ಪುರಂ: ಭಾರತೀಯ ಆಧ್ಯಾತ್ಮಿಕ ಗುರು ರಜನೀಶ್ ಒರೆಗಾನ್‌ನ ವಾಸ್ಕೋ ಕೌಂಟಿಯಲ್ಲಿರುವ ವಾಯುವ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ರಜನೀಶ್‌ಪುರಂ ದೇಶವನ್ನು ಕಟ್ಟಿದ್ದರು. ಧಾರ್ಮಿಕ ಉದ್ದೇಶದಿಂದ ರಜನೀಶ್‌ಪುರಂ ದೇಶವನ್ನು ನಿರ್ಮಿಸಲಾಗಿತ್ತು. ಇದು ತನ್ನದೇ ಆದ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿತ್ತು. ಇದನ್ನು 1981 ಮತ್ತು 1988 ರ ನಡುವೆ ನಗರವಾಗಿ ಸಂಯೋಜಿಸಲಾಗಿದೆ.