ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಮಹಿಳೆಯರು ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬುಧವಾರ 40 ವರ್ಷದೊಳಗಿನ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದು, ಇದರ ಸಿಸಿಟಿವಿ ವೀಡಿಯೊ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹೊಸ ವಿವಾದವೊಂದು ಹುಟ್ಟಿಕೊಂಡಿದ್ದು, ನಾಳೆ ಕೇರಳದಾದ್ಯಂತ ಬಂದ್ ಆಚರಿಸಲು ಅಯ್ಯಪ್ಪ ಭಕ್ತರು ಕರೆ ನೀಡಿದ್ಧಾರೆ. ದೇಶದಲ್ಲಿ ಮಹಿಳಾ ಪ್ರವೇಶವನ್ನು ನಿರ್ಬಂಧಿಸಿರುವ ಇನ್ನು ಅನೇಕ ದೇವಸ್ಥಾನಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಪುರುಷರಿಗೆ ನಿರ್ಬಂಧ ವಿಧಿಸಲಾಗಿರುವ ಎಂಟು ದೇವಾಲಯಗಳು ಭಾರತದಲ್ಲಿದೆ ಎಂದರೆ ನಂಬಲೇಬೇಕು. ಸದ್ಯ ಮಹಿಳೆಯರು ದೇಗುಲ ಪ್ರವೇಶದಿಂದ ಸುದ್ದಿಯಲ್ಲಿರುವ ಕೇರಳದಲ್ಲೂ ಪುರಷರಿಗೆ ಪ್ರವೇಶವಿರದ ದೇವಾಲಯ ಇರುವುದು ವಿಶೇಷ. ಇಂತಹ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿರುವ ಎಂಟು ದೇವಾಲಯಗಳ ಪರಿಚಯ ಇಲ್ಲಿವೆ.
ಬ್ರಹ್ಮ ದೇವಸ್ಥಾನ, ಪುಷ್ಕರ್: ರಾಜಸ್ಥಾನದ ಪುಷ್ಕರ್ನಲ್ಲಿರುವ ಬ್ರಹ್ಮ ದೇವಸ್ಥಾನವನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಏಕೈಕ ಬ್ರಹ್ಮ ದೇವಾಲಯವಾಗಿದ್ದು, ಇಲ್ಲಿನ ಪುಷ್ಕರ್ ಸರೋವರದಲ್ಲಿ ದೇವಿ ಸರಸ್ವತಿಯೊಂದಿಗೆ ಬ್ರಹ್ಮ ದೇವ ಯಜ್ಞ ಮಾಡಿದ್ದರು. ಈ ವೇಳೆ ಸರಸ್ವತಿ ದೇವಿಯು ಯಾವುದೊ ವಿಷಯಕ್ಕೆ ಕೋಪಗೊಂಡು ಈ ದೇವಾಲಯಕ್ಕೆ ಶಾಪ ನೀಡಿದ್ದರು ಎಂದು ನಂಬಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಅನುಮತಿ ನಿರಾಕರಿಸಲಾಗಿದೆ. ಅಂತೂ ಹೋದರೆ ಅವರ ವೈವಾಹಿಕ ಜೀವನದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಇಲ್ಲಿ ಅವಿವಾಹಿತರಿಗೆ ಪ್ರವೇಶವಿದ್ದು, ವಿವಾಹಿತರಿಗೆ ನಿರ್ಬಂಧ ವಿಧಿಸಲಾಗಿದೆ.
ಸಂತೋಷಿ ಮಾತೆ ಮಂದಿರ: ಸಂತೋಷಿ ಮಾತೆಯ ಉಪವಾಸ ವೃತವನ್ನು ಮಹಿಳೆಯರು ಮತ್ತು ಕನ್ಯಾ ಸ್ತ್ರೀಯರು ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಹುಳಿ ಪದಾರ್ಥಗಳನ್ನು ವೃತದಲ್ಲಿರುವವರು ತಿನ್ನುವಂತಿಲ್ಲ. ಹಾಗೆಯೇ ಪುರುಷರು ಶುಕ್ರವಾರ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ. ಆದರೆ ಇಲ್ಲಿ ಇತರೆ ದಿನಗಳಲ್ಲಿ ಪುರುಷರು ದೇವಾಲಯ ಪ್ರವೇಶಿಸಬಹುದಾದರೂ, ಶುಕ್ರವಾರದಂದು ಮಾತ್ರ ದೇವಸ್ಥಾನಕ್ಕೆ ಹೋಗುವಂತಿಲ್ಲ.
ಚಕ್ಕುಲತುಕಾವು ದೇವಾಲಯ: ಕೇರಳದ ಅಲೆಪ್ಪಿ ಜಿಲ್ಲೆಯಲ್ಲಿರುವ ಚಕ್ಕುಲತುಕಾವು ದೇವಾಲಯದಲ್ಲಿ ಭಗವತಿ ದೇವಿಯನ್ನು ಪ್ರತಿಸ್ಠಾಪಿಸಲಾಗಿದೆ. ದುರ್ಗಾ ಮಾತೆಯ ಅವತಾರವನ್ನು ಪೂಜಿಸಲಾಗುತ್ತಿರುವ ಈ ದೇವಾಲಯದಲ್ಲಿ ವಿಶೇಷ ಮಹಿಳಾ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಅಂತಹ ದಿನಗಳಲ್ಲಿ ಈ ದೇವಾಲಯಕ್ಕೆ ಪುರುಷರಿಗೆ ನಿಷೇಧ ಹೇರಲಾಗುತ್ತದೆ. ಇಲ್ಲಿನ ಆರ್ಚಕರು ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಕಾಲ ವೃತ ಆಚರಿಸುವುದಲ್ಲದೆ, ಮಹಿಳಾ ಭಕ್ತರ ಪಾದಗಳನ್ನು ತೊಳೆಯುತ್ತಾರೆ ಎನ್ನಲಾಗಿದೆ. ಈ ದಿನವನ್ನು ಧನು ಎನ್ನಲಾಗುತ್ತಿದ್ದು, ಅಂದು ದೇವಾಲಯದ ಆವರಣಕ್ಕೆ ಪುರುಷರಿಗೆ ನಿರ್ಬಂಧ ವಿಧಿಸಲಾಗುತ್ತದೆ.