ಪಿಕೆಟ್ 43 (Picket 43) ಎಂಬ ಇಂಡೋ-ಪಾಕ್ ಸೈನಿಕರ ಕಥೆಯ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ದೇಶದ ವಿಷಯ ಬಂದಾಗ ನಮಗೂ ನಮ್ಮ ದೇಶ ಪ್ರೇಮ ಮುಖ್ಯವಾಗಿರುತ್ತದೆ ಎಂದು. ಅಂದರೆ ಆಯಾ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರು ಆ ದೇಶದ ಪರವಾಗಿರುತ್ತಾರೆ. ಈ ವಿಷಯ ಈಗ ಏಕಪ್ಪಾ ಅಂದರೆ, ಪಾಕ್ ಸೈನ್ಯದಲ್ಲೂ ಎಲ್ಲಾ ಧರ್ಮದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತಕ್ಕೆ ವೈರಿ ಪಡೆಯಾದರೂ ಅಲ್ಲೂ ಕೂಡ ಸಿಖ್ ಹಾಗೂ ಹಿಂದೂ ಯೋಧರು ತಮ್ಮ ತಾಯ್ನಾಡಿಗಾಗಿ ಹೋರಾಡುತ್ತಿದ್ದಾರೆ ಎಂದರೆ ನಂಬಲೇಬೇಕು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಕ್ರಿಶ್ಚಿಯನ್ ಹಾಗೂ ಸಿಖ್ ಸಮುದಾಯದವರು ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿನ ಆಯ್ಕೆ ಮಂಡಳಿಯ ಅನುಸಾರ ಇಂಟರ್ ಸರ್ವೀಸಸ್ ಪರೀಕ್ಷೆಯಲ್ಲಿ ಎಲ್ಲರಿಗೂ ಸೇನೆ ಸೇರಲು ಅವಕಾಶವಿದೆ. ಅದಾಗ್ಯೂ, 2006 ರವರೆಗೆ ಪಾಕ್ ಸೇನೆಯಲ್ಲಿ ಕೇವಲ ಒಬ್ಬ ಹಿಂದೂ ಮತ್ತು ಸಿಖ್ ವ್ಯಕ್ತಿ ಮಾತ್ರ ಸ್ಥಾನಗಿಟ್ಟಿಸಿಕೊಂಡಿದ್ದರು. ಇನ್ನು ಒಂದಷ್ಟು ಕ್ರಿಶ್ಚಿಯನ್ ಧರ್ಮದವರು ಮೊದಲಿಂದಲೂ ಸೇನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
2006 ರಲ್ಲಿ ನ್ಯೂಸ್ ಏಜೆನ್ಸಿ ಪ್ರಕಟಿಸಿದ ವರದಿ ಪ್ರಕಾರ, ಕಳೆದ 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹಿಂದೂ ಧರ್ಮೀಯನೊಬ್ಬ ಸೇನೆಗೆ ಸೇರ್ಪಡೆಯಾಗಿದ್ದರು. ಇದಕ್ಕೂ ಮೊದಲು ಸಿಖ್ ವ್ಯಕ್ತಿಯೊಬ್ಬರು ಸೇನೆಯಲ್ಲಿ ಸ್ಥಾನ ಪಡೆದಿದ್ದರು ಎಂದು ತಿಳಿಸಲಾಗಿದೆ. ಹೀಗೆ ತಮ್ಮ ದೇಶದ ಸೇವೆಗೆ ಮುಂದಾಗಿದ್ದ ಹಿಂದೂ ಯುವಕನ ಹೆಸರು ದಾನಿಶ್. ಪಾಕ್ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಾನಿಶ್ ರಾಜಸ್ತಾನದ ಗಡಿಯಲ್ಲಿರುವ ಗ್ರಾಮೀಣ ಸಿಂಧ್ ತಾರ್ಪಾಕಾರ್ ಜಿಲ್ಲೆಯವರು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಪ್ರೇರಿತರಾಗಿ ದಾನಿಶ್ ಸೇನೆಯನ್ನು ಸೇರಿದ್ದರು. ಮುಷರಫ್ ಅವರನ್ನು ಅತ್ಯುತ್ತಮ ನಾಯಕ ಎಂದು ಕೊಂಡಾಡುವ ದಾನಿಶ್, ಅವರ ಆಡಳಿತದಲ್ಲೇ ಸೇನೆಗೆ ಸೇರ್ಪಡೆಯಾಗಿದ್ದರು .( ಮೇಲಿನ ಚಿತ್ರದಲ್ಲಿರುವ ವ್ಯಕ್ತಿ ಪಾಕ್ ಸೇನೆಯ ಮತ್ತೊಬ್ಬ ಹಿಂದೂ ಸೇನಾನಿ ಅನಿಲ್ ಕುಮಾರ್)
2010 ರಲ್ಲಿ ಸಿಖ್ ಸಮುದಾಯದ ಯುವಕ ಅಮರ್ಜಿತ್ ಸಿಂಗ್ ಅವರನ್ನು ಪಾಕಿಸ್ತಾನ ಸೇನಾ ರೇಂಜರ್ ಆಗಿ ನೇಮಕ ಮಾಡಲಾಯಿತು. ವಾಘಾ ಗಡಿಯಲ್ಲಿ ನಡೆದ ಪೆರೇಡ್ ಸಂದರ್ಭದಲ್ಲಿ ಅಮರ್ಜಿತ್ ಸಿಂಗ್ ಭಾರತದಾದ್ಯಂತ ಸುದ್ದಿಯಾಗಿದ್ದರು. ಅದೇ ರೀತಿ ಮತ್ತೊಬ್ಬ ಸಿಖ್ ಯುವಕ ಕೂಡ ಪಾಕ್ ಸೇನೆಯಲ್ಲಿ ಕೋಸ್ಟ್ ಗಾರ್ಡ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಹಾಗೆಯೇ ಲಾಲ್ ಚಂದ್ ರಬರಿ ಎಂಬ ಯುವಕನು ಪಾಕ್ ಸೇನೆಯಲ್ಲಿ ಲಾನ್ಸ್ ನಾಯಕ್ ಹುದ್ದೆಯಲ್ಲಿ ಹುತ್ಮಾತ್ಮರಾಗಿದ್ದಾರೆ.