ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಇದೆ. ಇನ್ಮುಂದೆ ನೀವು ರೈಲು ಟಿಕೆಟ್ ಕಾಯ್ದಿರಿಸಲು ರೈಲ್ವೆ ಕೌಂಟರ್(Railway Counter)ಗೆ ಹೋಗಬೇಕು ಎಂದೇನಿಲ್ಲ, ಅಥವಾ ನಿಮ್ಮ ಹತ್ತಿರ IRCTC ಏಜೆಂಟ್ ಇಲ್ಲದಿದ್ದರೂ ಪರವಾಗಿಲ್ಲ. ನೀವು ಹತ್ತಿರದ ಅಂಚೆ ಕಚೇರಿಗೆ(Post Office) ಹೋಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು (Train Ticket Booking). ಹೌದು, ಭಾರತೀಯ ರೈಲ್ವೆ ಈ ಹೊಸ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.
ಇದರ ಭಾಗವಾಗಿ ರೈಲು ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಅಂಚೆ ಇಲಾಖೆ ತೆಗೆದುಕೊಳ್ಳುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈಶಾನ್ಯ ರೈಲ್ವೆ ಅಡಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವುದರ ಜೊತೆಗೆ ವೈಷ್ಣೋದೇವಿ ಮತ್ತು ಕಾಮಾಖ್ಯ ದೇವಸ್ಥಾನಗಳಿಗೆ ಎರಡು ರೈಲುಗಳನ್ನು ಉದ್ಘಾಟಿಸಿದ್ದರು. ಅಂಚೆ ಕಚೇರಿ ಮೂಲಕ ರೈಲು ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನೂ ಆರಂಭಿಸಲಾಗುವುದು ಎಂದು ಹೇಳಿದ್ದರು.
ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಸೇವೆಯು ಪ್ರಯಾಣಿಕರಿಗೆ ಲಭ್ಯವಿರುತ್ತದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗದೆ ತಮ್ಮ ಊರಿನಲ್ಲಿರುವ ಅಂಚೆ ಕಚೇರಿಯಲ್ಲಿ ಟಿಕೆಟ್ ಕಾಯ್ದಿರಿಸಲು ಈ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ರೈಲು ನಿಲ್ದಾಣಗಳ ಬಳಿ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಹೇಳಿದರು.
ಮಾರ್ಚ್ 2020ರ ಹೊತ್ತಿಗೆ ಭಾರತದಲ್ಲಿ 1,56,721 ಅಂಚೆ ಕಚೇರಿಗಳು ಸ್ಥಾಪನೆಯಾಗಿವೆ. ಇದು ವಿಶ್ವದ ಅತಿದೊಡ್ಡ ಅಂಚೆ ಜಾಲವಾಗಿದೆ. ಅಂಚೆ ಜಾಲ ಪ್ರತಿ ಹಳ್ಳಿಗೂ ವ್ಯಾಪಿಸಿದೆ. ಆದ್ದರಿಂದ ನೀವು ಯಾವುದೇ ಸೇವೆಗಳನ್ನು ಹಳ್ಳಿಗಳಿಗೆ ವಿಸ್ತರಿಸಲು ಬಯಸಿದರೆ ಅಂಚೆ ಜಾಲವು ಉಪಯುಕ್ತವಾಗಿದೆ. ಈ ನೆಟ್‌ವರ್ಕ್ ಬಳಸಿಕೊಂಡು ಪ್ರಯಾಣಿಕರಿಗೆ ರೈಲು ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಆಶಿಸುತ್ತಿದೆ.
ರೈಲು ಪ್ರಯಾಣಿಕರು ರೈಲು ಟಿಕೆಟ್ ತೆಗೆದುಕೊಳ್ಳಲು ಹಲವು ಮಾರ್ಗಗಳಿವೆ. ರೈಲು ಟಿಕೆಟ್‌ಗಳನ್ನು ಹತ್ತಿರದ ರೈಲು ನಿಲ್ದಾಣದಲ್ಲಿರುವ ಕೌಂಟರ್‌ನಲ್ಲಿ ತೆಗೆದುಕೊಳ್ಳಬಹುದು. ಮೀಸಲಾತಿ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸುವಿಕೆಯನ್ನು ಮಾಡಬಹುದು. IRCTC ಅಧಿಕೃತ ಏಜೆಂಟ್‌ಗಳಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ನೀವು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು ಬಯಸಿದರೆ IRCTC ವೆಬ್‌ಸೈಟ್ ಇದೆ. IRCTC ಮೊಬೈಲ್ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.