ವಂದೇ ಭಾರತ್ ರೈಲುಗಳನ್ನು ಕೇಂದ್ರ ಸರ್ಕಾರ ಬಹಳ ಪ್ರತಿಷ್ಠೆಯಾಗಿ ಪರಿಗಣಿಸಿತ್ತು. ಇದೇ ಕಾರಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾದಾಗ ಇಡೀ ದೇಶ ಕುತೂಹಲದಿಂದ ಎದುರು ನೋಡಿತ್ತು. ಏಕೆಂದರೆ ಭಾರತೀಯ ರೈಲ್ವೇ ನಿರ್ವಹಣೆಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹೈ ಸ್ಪೀಡ್ ರೈಲು ಇದಾಗಿತ್ತು. ದೇಶಾದ್ಯಂತ ಈಗಾಗಲೆ ಎಂಟು ರೈಲುಗಳು ಪ್ರಾರಂಭವಾಗಿವೆ. ಇದು ಗಂಟೆಗೆ 160- 180 ಕಿ.ಮೀ. ಅವರು ವೇಗದಲ್ಲಿ ಚಲಿಸುತ್ತದೆ.
ಆದರೆ ಹಲವು ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಪ್ರಯಾಣಿಕರು ನೀರಿನ ಬಾಟಲಿಗಳು, ಆಹಾರ ಪದಾರ್ಥಗಳು ಮತ್ತು ಪಾಲಿಥಿನ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಪ್ರತಿ ಬೋಗಿಯಲ್ಲಿ ಡಸ್ಟ್ ಬಿನ್ ಇದ್ದರೂ ಸಹಾ ಆದರೆ ಪ್ರಯಾಣಿಕರು ಕಸವನ್ನು ಡಸ್ಟ್ಬಿನ್ಗೆ ಹಾಕುವ ಬದಲು ಕುಳಿತಲ್ಲೇ ಬಿಟ್ಟು ಹೋಗಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಸಿಕ್ಕಾಬಟ್ಟೆ ಕಸ ಸಂಗ್ರಹವಾಗಿ ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಪ್ರಯಾಣಿಕರ ಬೇಜವಾಬ್ದಾರಿತನವನ್ನು ಟೀಕಿಸಿದ್ದಾರೆ. ರೈಲಿನೊಳಗೆ ಖಾಲಿ ಬಾಟಲಿಗಳು, , ಪೇಪರ್ ಪ್ಲೇಟ್ಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಫೋಟೋಗಳನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, 'We the People' ಎಂಬ ಶಿರ್ಷೀಕೆಯನ್ನು ನೀಡಿ ವ್ಯಂಗ್ಯ ಮಾಡಿದ್ದಾರೆ.
ಅವನೀಶ್ ಶರಣ್ರ ಈ ಟ್ವೀಟ್ಗೆ ಟ್ವಿಟರ್ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಹೀಗೆ ಕಸ ಹಾಕುವುತ್ತಿರುವುದಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಜನರು ಉತ್ತಮ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಕೇಳುತ್ತಾರೆ, ಆದರೆ ಅದು ಸಿಕ್ಕಾಗ ಕಾಳಜಿ ವಹಿಸಲು ಅಥವಾ ಅದನ್ನು ಸ್ವಚ್ಛವಾಗಿಡಲು ವಿಫಲರಾಗಿದ್ದಾರೆ. ನಾವು ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ಹೊರತು ಏನೂ ಬದಲಾಗುವುದಿಲ್ಲ. ರಾಷ್ಟ್ರವನ್ನು ಹೇಗೆ ಆರೋಗ್ಯವಾಗಿಡಬೇಕು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಒಬ್ಬರು ನಮಗೆ ಈ ಸುಂದರವಾದ ರೈಲನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ ಮತ್ತೊಂದೆಡೆ ಇದೇ ರೈಲಿನಲ್ಲಿ ಕೊಳಕನ್ನು ಸೃಷ್ಟಿಸಿದ್ದಾರೆ. ಇಲ್ಲಿ ನಾವೇ ಸೃಷ್ಟಿಕರ್ತರು ಮತ್ತು ನಾವೇ ವಿನಾಶ ಮಾಡುವವರು ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಮತ್ತೊಬ್ಬರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಜನರು ಈ ರೀತಿ ಕೊಳಕು ಮಾಡುವವರ ವಿರುದ್ಧ ಭಾರತೀಯ ರೈಲ್ವೆಗೆ ದೂರು ನೀಡಬೇಕು, ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ರೀತಿ ಘಟನೆ ಇದೇ ಮೊದಲೇನಲ್ಲ. ಈ ತಿಂಗಳ ಆರಂಭದಲ್ಲಿ, ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎಲ್ಲೆಂದರಲ್ಲಿ ಕಸ ಕಂಡಿದ್ದರಿಂದ, ರೈಲುಗಳ ಒಳಗೆ ಶುಚಿತ್ವವನ್ನು ಕಾಪಾಡುವಂತೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿತ್ತು. ರೈಲು ವಿಶಾಖಪಟ್ಟಣಂ ತಲುಪಿದಾಗ, ಬೋರ್ಡಿನ ಹೌಸ್‌ಕೀಪಿಂಗ್ ಸಿಬ್ಬಂದಿ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದರೂ ಸಹ ಬೋಗಿಗಳಲ್ಲಿ ಕಸ ಸಂಗ್ರಹ ನಿರಂತರವಾಗುತ್ತಿದೆ ಎಂದಿದ್ದಾರೆ.