'ಗಜ' ಚಂಡಮಾರುತಕ್ಕೆ 20 ಬಲಿ: ತಮಿಳುನಾಡಿನಲ್ಲಿ ಹೈ ಅಲರ್ಟ್​

ತಮಿಳುನಾಡಿನಲ್ಲಿ 'ಗಜ' ಚಂಡಮಾರುತದಿಂದ ಭಾರೀ ಹಾನಿಯುಂಟಾಗಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಚಂಡ ಮಾರುತಕ್ಕೆ 20 ಮಂದಿ ಬಲಿಯಾಗಿದ್ದು, 80 ಸಾವಿರಕ್ಕೂ ಅಧಿಕ ಜನರನ್ನುಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಸಂತ್ರಸ್ತರಿಗಾಗಿ 450ಕ್ಕೂ ಅಧಿಕ ಗಂಜಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಕೆಲ ಪ್ರದೇಶಗಳಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಬಿರುಗಾಳಿಗೆ ಭಾರೀ ಅನಾಹುತ ಸಂಭವಿಸಿದ್ದು, ಅನೇಕ ಕಡೆ ಮರಗಳು, ವಿದ್ಯುತ್​ ಕಂಬಗಳು ನೆಲಕ್ಕುರುಳಿವೆ. ತಮಿಳುನಾಡು ಕರಾವಳಿ ತೀರದಲ್ಲಿ ಮೀನುಗಾರಿಕೆಯನ್ನು ನಿಲ್ಲಿಸಲಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಆಗಿದ್ದು, ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.

  • News18
  • |
First published: