ಕುಡಿತದ ವ್ಯಸನಿಯಾಗಿದ್ದ ನಾಯಿ, ಮಾಲೀಕನ ಸಾವಿನ ನಂತರ ತೀವ್ರ ಅಸ್ವಸ್ಥಗೊಂಡಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಸಾಕು ನಾಯಿಯೊಂದು ಕುಡಿತದ ಚಟಕ್ಕೆ ಬಿದ್ದಿರುವ ಮೊದಲ ಪ್ರಕರಣವೂ ಇದಾಗಿದೆ. ಇಂಗ್ಲೆಂಡ್ನ ಪ್ಲೈಮೌತ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕುಡಿತದ ಚಟಕ್ಕೆ ದಾಸನಾಗಿದ್ದ. ಈ ಪ್ರಕ್ರಿಯೆಯಲ್ಲಿ ನಾಯಿಯನ್ನೂ ಕುಡಿತದ ಚಟಕ್ಕೆ ಬೀಳಿಸಿದ್ದ. ಆದರೆ ಮಾಲೀಕನ ಸಾವಿನ ಬಳಿಕ ನಾಯಿ ತೀವ್ರ ಅಸ್ವಸ್ಥಗೊಂಡಿತ್ತು. ಆ ನಾಯಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಮಾಲಿಕ ತಾನೂ ಕುಡಿಯುವ ವೇಳೆ ಕೊಕೊ ಎಂಬ ನಾಯಿಗೆ ನಿರಂತರವಾಗಿ ವೈನ್ ಕುಡಿಸುತ್ತಿದ್ದ. ಬಹಳ ದಿನಗಳಿಂದ ಈ ಚಟ ಮುಂದುವರಿದಿದ್ದರಿಂದ ನಾಯಿ ಕುಡಿತದ ಚಟಕ್ಕೆ ದಾಸನಾಗಿತ್ತು. ಆದರೆ ಮಾಲಿಕ ಸಾವನ್ನಪ್ಪಿದ ನಂತರ ಎರಡು ವರ್ಷದ ಲ್ಯಾಬ್ರಡಾರ್ ತಳಿಯ ಕೋಕೊ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಇದರ ಜೊತೆಗಾರ ನಾಯಿಯೊಂದಿಗೆ ಪ್ರಾಣಿಧಾಮಕ್ಕೆ ಒಪ್ಪಿಸಿದ್ದರು.
ದುರದೃಷ್ಟವಶಾತ್, ಕೋಕೊ ಜೊತೆಗೆ ಬಂದಿದ್ದ, ಕುಡಿತದ ಚಟ ಹೊಂದಿದ್ದ ಮತ್ತೊಂದು ನಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ನಂತರ ಕೋಕೊವನ್ನಾದರೂ ಉಳಿಸಿಕೊಳ್ಳಲು ತೀವ್ರ ನಿಗಾ ವಹಿಸಿದ್ದಾರೆ. ಇದೀಗ ಕೋಕೊ ನಾಯಿಯ ಸ್ಥಿತಿ ಸುಧಾರಿಸಿದೆ. ಮತ್ತಷ್ಟು ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ನಾಲ್ಕು ವಾರಗಳ ಕಾಲ ನಿದ್ರೆ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ವುಡ್‌ಸೈಡ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ತಿಳಿಸಿದೆ.
ವುಡ್‌ಸೈಡ್ ಅನಿಮಲ್ ವೆಲ್‌ಫೇರ್ ಈ ಬಗ್ಗೆ ತನ್ನ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಕುಡಿತದ ಚಟದಿಂದ ಬಳಲುತ್ತಿದ್ದ ಕೋಕೊವನ್ನು ಕೆನಲ್‌ಗಳಿಂದ ದೂರವಿರಿಸಿ ಟ್ರಸ್ಟ್‌ನ ಡನ್‌ರೋಮಿನ್ ಘಟಕದಲ್ಲಿ ಮನೆಯ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಕೋಕೊಗೆ ಹೊಸ ಮನೆಯ ಅವಶ್ಯಕತೆಯಿದೆ ಎಂದು ತಿಳಿಸಿದೆ. ಕೋಕೊ ದುರಂತ ಕಥೆ ಕೇಳಿ ನೆಟ್ಟಿಗರು ಭಾವುಕರಾಗಿ ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.