ಭೂಮಿಯ ಉಪಗ್ರಹವಾಗಿರುವ ಚಂದ್ರನ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ದೇಶಗಳು ಪ್ರಯತ್ನಿಸಿವೆ. ಈ ಸಾಲಿನಲ್ಲಿ ಯಶಸ್ವಿಯಾಗಿದ್ದು ಬೆರಳೆಣಿಕೆ ದೇಶಗಳು ಮಾತ್ರ. ಈ ಸಾಲಿನಲ್ಲಿ ಭಾರತವೂ ಇದೇ ಎಂಬುದು ವಿಶೇಷ. ಚಂದ್ರಯಾನ-1 ಯಶಸ್ವಿ ನಂತರ ಚಂದ್ರಯಾನ 2 ಉಡಾವಣೆಗೊಂಡಿತ್ತು. ಈ ಯೋಜನೆ ಯಶಸ್ಸಿಗೆ ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ಭಾರತದ ಇಸ್ರೋ ಸಿದ್ಧವಾಗಿದೆ.
2008 ಅಕ್ಟೋಬರ್ 22ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-1 ಉಡಾವಣೆಗೊಂಡಿತ್ತು. ಈ ಯಶಸ್ವಿ ಯೋಜನೆಗೆ ವೆಚ್ಛವಾಗಿದ್ದು ಬರೋಬ್ಬರಿ 386 ಕೋಟಿ ರೂಪಾಯಿ. ಸುಮಾರು ಒಂದು ವರ್ಷಗಳಕಾಲ ಈ ಉಪ್ರಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಆಗಸ್ಟ್ 28, 2009ರಂದು ಈ ಯೋಜನೆ ಅಂತ್ಯವಾಗಿದೆ ಎಂದು ಘೋಷಿಸಿತ್ತು. ಉಪಗ್ರಹದಲ್ಲಿ ಸೆನ್ಸಾರ್ ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದು ಸೇರಿ ಸಾಕಷ್ಟು ತಾಂತ್ರಿಕ ದೋಷಗಳು ಉಪಗ್ರಹದಲ್ಲಿ ಕಾಣಿಸಿಕೊಂಡಿದ್ದವು.
312 ದಿನಗಳ ಕಾಲ ಕಾರ್ಯನಿರ್ವಹಿಸಿದ್ದ ಆ ಉಪಗ್ರಹ ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು. ಇಡೀ ಜಗತ್ತಿಗೆ ಜೀವಾಳವಾಗಿರುವ ನೀರು ಚಂದ್ರನಲ್ಲೂ ಇದೆ ಎಂಬುದನ್ನು ಪತ್ತೆ ಹಚ್ಚಿದ ಹೆಗ್ಗಳಿಕೆ ಚಂದ್ರಯಾನ 1ನದ್ದು. ಇನ್ನು, ಚಂದ್ರನ ಸಾಕಷ್ಟು ಫೋಟೋಗಳನ್ನು ಈ ಉಪಗ್ರಹ ಕಳುಹಿಸಿಕೊಟ್ಟಿತ್ತು. ಅಲ್ಲದೆ ಚಂದಿರನಂಗಳದಿಂದ ಭೂಮಿ ಹೇಗೆ ಕಾಣುತ್ತದೆ ಎನ್ನುವ ಚಿತ್ರಣವನ್ನು ಚಂದ್ರಯಾನ 1 ತೋರಿಸಿಕೊಟ್ಟಿತ್ತು. ಚಂದಿರನಲ್ಲಿ ಯಾವ ಯಾವ ಖನಿಜಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ ಹೆಚ್ಚುಗಾರಿಕೆ ಈ ಯೋಜನೆಯದ್ದು.
ಭಾರತ ಹಾಗೂ ರಷ್ಯಾ 2007ರಲ್ಲಿ ಚಂದ್ರಯಾನ 2 ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್ ಹಾಗೂ ರೋವರ್ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. ಆಗಸ್ಟ್ 2009ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ರಷ್ಯಾ ಲ್ಯಾಂಡರ್ ನೀಡಲು ವಿಳಂಬ ಮಾಡಿದ್ದರಿಂದ 2013ಕ್ಕೆ ಯೋಜನೆಯನ್ನು ಮುಂದೂಡಲಾಗಿತ್ತು. ನಂತರ 2016ಕ್ಕೆ ಯೋಜನೆಯನ್ನು ನಿಗದಿ ಮಾಡಲಾಗಿತ್ತು. ಕೊನೆಗೆ ರಷ್ಯಾ ಲ್ಯಾಂಡರ್ ನೀಡಲು ವಿಫಲವಾದ್ದರಿಂದ ಭಾರತವೇ ಅದನ್ನು ಸಿದ್ಧಪಡಿಸಿತ್ತು.
ಆಗಸ್ಟ್ 20: ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆಯನ್ನು ಆ.22ರಂದು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು. ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿತ್ತು. ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದರು.
ಈ ಉಪಗ್ರಹ ಟೆರ್ರೇನ್ ಮ್ಯಾಪಿಂಗ್ ಕ್ಯಾಮರಾ 2 ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ 20 ಕೆಜಿ ತೂಕದ ರೋವರ್, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್-ರೋವರ್ನ ಆಯುಷ್ಯ 14 ದಿನಗಳಿದ್ದರೆ ಆರ್ಬಿಟರ್ 1 ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.