ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಎಟಿಎಂ ದರೋಡೆಯಲ್ಲಿ ಪತ್ತೆಯಾದ ಹಲವಾರು ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈ ಸುಧೀರ್ ಮಿಶ್ರಾ ಹೆಸರು ಕೇಳಿ ಬಂದಿದೆ. ಪೊಲೀಸರ ಪ್ರಕಾರ, ಬಿಹಾರದ ಛಾಪ್ರಾ ನಿವಾಸಿ ಸುಧೀರ್ ಮಿಶ್ರಾ ಎಟಿಎಂ ಬಾಬಾ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ನಿರುದ್ಯೋಗಿ ಯುವಕರನ್ನು ತನ್ನ ಗ್ಯಾಂಗ್‌ಗೆ ಸೇರಿಸಿಕೊಂಡು ಎಟಿಎಂ ಒಡೆಯುವ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.
ಎಟಿಎಂ ದರೋಡೆಗೆ ಮುನ್ನ ಇಬ್ಬರು ಆರೋಪಿಗಳಾದ ದೇವಶ್ ಪಾಂಡೆ ಮತ್ತು ವಿಜಯ್ ಪಾಂಡೆ ಈ ಪ್ರದೇಶದಲ್ಲಿ ಕಣ್ಗಾವಲಾಗಿದ್ದರು. ಎಟಿಎಂ ಕತ್ತರಿಸಲು ಹರಿಯಾಣದ ಮೇವಾತ್‌ನಿಂದ ನಾಲ್ವರು ದರೋಡೆಕೋರರನ್ನು ಕರೆಸಲಾಗಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಎಟಿಎಂ ದರೋಡೆಯ ಸಮಯದಲ್ಲಿ ಎಟಿಎಂ ಬಾಬಾ ಬಿಹಾರದಲ್ಲಿದ್ದುಕೊಂಡೆ ಮೊಬೈಲ್ ಫೋನ್ ಮೂಲಕ ಇತರ ಶಂಕಿತರೊಂದಿಗೆ ನಿರಂತರವಾಗಿ ಸೂಚನೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಎಟಿಎಂ ಯಂತ್ರವನ್ನು ಕತ್ತರಿಸಲು ಕಳ್ಳರು ಮೂರು ಗ್ಯಾಸ್ ಪೈಪ್, ಸಿಲಿಂಡರ್ ರೆಗ್ಯುಲೇಟರ್, ಗ್ಯಾಸ್ ಮೀಟರ್, ಆರು ಆ್ಯಕ್ಷನ್ ಬ್ಲೇಡ್, ಎರಡು ಕಟಿಂಗ್ ಪ್ಲೈಯರ್ ಮತ್ತು ಸುತ್ತಿಗೆ ಬಳಸಿದ್ದಾರೆ. ಆರೋಪಿಗಳಿಗೆ ಎಟಿಎಂ ಬಾಬಾ ಸುಧೀರ್ ಮಿಶ್ರಾ ಕಳ್ಳತನ ಮಾಡಲು ತರಬೇತಿ ನೀಡಿದ್ದ. ಎಟಿಎಂ ಯಂತ್ರದಲ್ಲಿರುವ ಸಿಸಿಟಿವಿ ಕ್ಯಾಮೆರಾಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳಲು ಮುಖಕ್ಕೆ ಇಂಕು ಹಾಕಿಕೊಳ್ಳುವುದು. ಎಟಿಎಂ ಹೊರಗೆ ಇಬ್ಬರನ್ನು ನಿಲ್ಲಿಸಿ ಯಾರಾದರೂ ಬರುತ್ತಾರಾ ಎನ್ನುವುದನ್ನು ಗಮನಿಸುವುದು, ನಂತರ ಕೇವಲ 15-16 ನಿಮಿಷದಲ್ಲಿ ಆರೋಪಿಗಳು ಎಟಿಎಂ ಒಡೆದು ಹಣವನ್ನು ತರುವುದರ ಬಗ್ಗೆ ಸಂಪೂರ್ಣ ತರಬೇತಿ ನೀಡಿದ್ದ ಎಂದು ತಿಳಿದುಬಂದಿದೆ. ಕಳ್ಳರಿಂದ 9 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.