ಈಗಂತೂ ಎರಡು ಮೂರು ನೆರೆಹೊರೆಯ ರಾಜ್ಯಗಳನ್ನು ಜೋಡಿಸುವ ಹೆದ್ದಾರಿಗಳನ್ನು ಸರ್ಕಾರ ಎಕ್ಸ್‌ಪ್ರೆಸ್ ವೇ ಗಳಾಗಿ ಪರಿವರ್ತಿಸುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಇಲ್ಲಿಯೂ ಸಹ ನಾವು ಅಂತಹದೇ ಒಂದು ಬಹುನಿರೀಕ್ಷಿತ ಎಕ್ಸ್‌ಪ್ರೆಸ್ ವೇ ಬಗ್ಗೆ ಮಾತಾಡಲಿದ್ದೇವೆ. ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ನಿರ್ಮಾಣ ಕಾರ್ಯ ಕರ್ನಾಟಕದಲ್ಲಿ ಈಗಾಗಲೇ ಪ್ರಗತಿಯಲ್ಲಿರುವುದು ನಮಗೆಲ್ಲಾ ಗೊತ್ತೇ ಇದೆ. 262 ಕಿಲೋಮೀಟರ್ ಚತುಷ್ಪಥ ಹೆದ್ದಾರಿ ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆಯಂತೆ.
ಮೂರು ರಾಜ್ಯಗಳ ಮೂಲಕ ಹಾದು ಹೋಗುತ್ತೆ ಈ ಹೈಸ್ಪೀಡ್ ಕಾರಿಡಾರ್: ಮೂರು ರಾಜ್ಯಗಳ ಮೂಲಕ ಹಾದು ಹೋಗುವ ಹೈಸ್ಪೀಡ್ ಕಾರಿಡಾರ್ ಎರಡು ಮಹಾನಗರಗಳಾದ ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಎರಡೂವರೆ ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆಯಂತೆ. ಪ್ರಸ್ತುತವಾಗಿ ಬೆಂಗಳೂರಿನಿಂದ ಚೆನ್ನೈ ನಗರಕ್ಕೆ 300 ಕಿಲೋಮೀಟರ್ ದೂರವನ್ನು ಕ್ರಮಿಸಲು ಐದು ಗಂಟೆಗಳು ಬೇಕು.
262 ಕಿಲೋಮೀಟರ್ ಗಳಲ್ಲಿ ತಮಿಳುನಾಡಿನಲ್ಲಿ 85 ಕಿಲೋಮೀಟರ್, ಆಂಧ್ರಪ್ರದೇಶದಲ್ಲಿ 71 ಕಿಲೋಮೀಟರ್, ಕರ್ನಾಟಕದಲ್ಲಿ 106 ಕಿಲೋಮೀಟರ್ ಒಳಗೊಂಡಿದೆ. ಪ್ರಸ್ತುತ ಯೋಜನೆಯ ಪ್ರಕಾರ, ಈ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದರೂ, ಮುಂದಿನ ವರ್ಷದ ಅಂತ್ಯದ ವೇಳೆಗೆ ಹೆದ್ದಾರಿ ಸಾರ್ವಜನಿಕರಿಗಾಗಿ ತೆರೆಯುವ ನಿರೀಕ್ಷೆಯಿದೆ. ಎನ್ಎಚ್ಎಐ ಈ ಯೋಜನೆಯನ್ನು ನಿರ್ಮಾಣದ ಮೂರು ಹಂತಗಳಾಗಿ ವಿಂಗಡಿಸಿದೆ.
ಈ ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ರೂಪಾಯಿಗಳಾಗಿದ್ದು, ಮೇ 2022 ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಹೈಸ್ಪೀಡ್ ಕಾರಿಡಾರ್ ಹೆದ್ದಾರಿಯ ಉದ್ದಕ್ಕೂ ಮೆಗಾಸಿಟಿಗಳು ಮತ್ತು ಶ್ರೇಣಿ -3 ನಗರಗಳ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುತ್ತದೆ. ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೈಗಾರಿಕಾ ಕೇಂದ್ರಗಳನ್ನು ಚೆನ್ನೈ ಬಂದರಿಗೆ ಸಂಪರ್ಕಿಸುತ್ತದೆ.
ಚೆನ್ನೈನಲ್ಲಿ, ಎಕ್ಸ್‌ಪ್ರೆಸ್ ವೇ ಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಪಲ್ಲವರಂ ಫ್ಲೈ ಓವರ್ ಅನ್ನು ತಾಂಬರಂನಲ್ಲಿರುವ ಚೆನ್ನೈ ಬೈಪಾಸ್ ಗೆ ಸಂಪರ್ಕಿಸುವ ಕಾರಿಡಾರ್ ಅನ್ನು ಯೋಜಿಸುತ್ತಿದೆ. ಅಲ್ಲದೆ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮತ್ತು ಈಸ್ಟ್ ಕೋಸ್ಟ್ ರಸ್ತೆಯಿಂದ ಜಿಎಸ್‌ಟಿ ರಸ್ತೆಗೆ ರಸ್ತೆ ಸಂಪರ್ಕವನ್ನು ವಿಸ್ತರಿಸಲಾಗುವುದು.