ಪತಂಜಲಿ ಕಂಪನಿ ಮೂಲಕ ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಾಬಾ ರಾಮ್ ದೇವ್ ಮತ್ತೊಮ್ಮೆ ಬೃಹತ್ ಕಂಪನಿಗಳ ನಿದ್ದೆ ಗೆಡಿಸಲು ತಯಾರಾಗಿದ್ದಾರೆ. ಸ್ವದೇಶೀ ಉತ್ಪನ್ನದ ಮೂಲಕ ದೇಶದ ಮನೆ ಮಾತಾಗಿರುವ ಪತಾಂಜಲಿ ಇದೇ ಮೊದಲ ಬಾರಿಗೆ ರಿಟೇಲ್ ಔಟ್ಲೆಟ್ನ್ನು ಪ್ರಾರಂಭಿಸಿದೆ. ಪತಂಜಲಿ ಪರಿಧಾನ್ ಹೆಸರಿನ ಈ ಸ್ಟೋರ್ನಲ್ಲಿ ದಿನನಿತ್ಯದ ವಸ್ತುಗಳಿಂದ ಹಿಡಿದು ಟೀ ಶರ್ಟ್, ಜೀನ್ಸ್, ಚಪ್ಪಳಿಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಗ್ರಾಹಕರು ಖರೀದಿಸಬಹುದು. ಪತಂಜಲಿ ಜನಪ್ರಿಯತೆಗೆ ಅನುಗುಣವಾಗಿ ಎಲ್ಲ ನಗರಗಳಲ್ಲಿ ಸ್ಟೋರ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಸ್ಟೋರ್ನ ಫ್ರಾಂಚೈಸಿಯನ್ನು ಯಾರೂ ಬೇಕಾದರೂ ಪಡೆಯಬಹುದು ಎಂದು ಪತಾಂಜಲಿ ಸಂಸ್ಥೆ ತಿಳಿಸಿದೆ.
ಫ್ರಾಂಚೈಸಿ ಪಡೆಯಲು ಷರತ್ತುಗಳೇನು?: ಪತಂಜಲಿ ರಿಟೇಲ್ ಸ್ಟೋರ್ನ ಫ್ರಾಂಚೈಸಿ ನೀಡುವುದರ ಬಗ್ಗೆ ಬಾಬಾ ರಾಮ್ ದೇವ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಕೆಲ ನಿಬಂಧನೆಗಳನ್ನು ವಿಧಿಸಿದ್ದು, ಫ್ರಾಂಚೈಸಿ ಪಡೆಯುವ ವ್ಯಕ್ತಿಯ ಬಳಿ ಸ್ಟೋರ್ಗೆ ಬೇಕಾಗಿರುವ ಸ್ಥಳವಕಾಶ ಇರಬೇಕು. ಇದು ಮಾಲ್ನಲ್ಲಿ ಆಗಿರಬಹುದು ಅಥವಾ ವಾಣಿಜ್ಯ ಸಂಕೀರ್ಣದಲ್ಲಿ ಆಗಿರಬಹುದು. ಆದರೆ ಕನಿಷ್ಠ 2,000 ಚದರ ಅಡಿ ಸ್ಥಳ ಹೊಂದಿರಬೇಕು. ಅಲ್ಲದೆ ಅದು ನೆಲ ಮಾಳಿಗೆಯಲ್ಲಿರಬೇಕು. ಶಾಪ್ನ ಮುಂದಿನ ವಿಸ್ತೀರ್ಣ 20 ಅಡಿ ಹಾಗೂ ಎತ್ತರ 10 ಅಡಿಯಾಗಿರಬೇಕು. ಅದೇ ರೀತಿ ಗಾರ್ಮೆಂಟ್ಸ್ ಮತ್ತು ಟೆಕ್ಸ್ಟೈಲ್ಸ್ ಫೀಲ್ಡ್ನಲ್ಲಿ ಅನುಭವ ಹೊಂದಿದ್ದರೆ ಉತ್ತಮ ಎಂದು ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಸೂಪರ್ ಸ್ಟೋರ್ನ್ನು ಪತಾಂಜಲಿ ಆರಂಭಿಸಿದೆ. ಈ ಸೂಪರ್ ಸ್ಟೋರ್ನಲ್ಲಿ ಶುದ್ಧ ದೇಸಿ ಉಡುಪುಗಳು ಹಾಗೂ ಪಾಶ್ಚಾತ್ಯ ಶೈಲಿಯ ಉಡುಗೆ ತೊಡುಗೆಗಳು ಸಿಗಲಿದೆ. ಅಲ್ಲದೆ ಆಭರಣಗಳು, ಚಪ್ಪಳಿಗಳು, ನೈಸರ್ಗಿಕ ತೈಲಗಳು, ಮಕ್ಕಳ ಆರೈಕೆಯ ಉತ್ಪನ್ನಗಳು ಹಾಗೂ ಕೆಲ ಮನೆಪಯೋಗಿ ವಸ್ತುಗಳು ದೊರೆಯಲಿದೆ. 5 ಸಾವಿರ ರೂ.ಗೆ ಇತರೆ ಬ್ರಾಂಡ್ಗಳು ಮಾರುತ್ತಿರುವ ಜೀನ್ಸ್ಗಳನ್ನು ಪತಾಂಜಲಿ ಕೇವಲ 500 ರೂ. ಮಾರಾಟ ಮಾಡಲಿದೆ. ಅಲ್ಲದೆ ದೀಪಾವಳಿ ಪ್ರಯುಕ್ತ ಎಲ್ಲ ಉಡುಪುಗಳ ಮೇಲೆ 25% ರಿಯಾಯಿತಿ ನೀಡಿದ್ದೇವೆ. ನಮ್ಮ ಸೂಪರ್ ಸ್ಟೋರ್ ಸಂಸ್ಕಾರ್, ಅಸ್ತ ಮತ್ತು ಲಿವ್ ಫಿಟ್ ಎಂಬ ಹೆಸರಿನಲ್ಲಿ ಬಟ್ಟೆಗಳನ್ನು ಪರಿಚಯಿಸಿದ್ದು ಇದೆಲ್ಲವೂ ಸ್ವದೇಶಿ ಉತ್ಪನ್ನಗಳಾಗಿವೆ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.
ಇದಲ್ಲದೆ ಮೂರು ವಿಭಿನ್ನ ಯೋಜನೆ ವಿಸ್ತರಿಸಲು ಪತಂಜಲಿ ಮುಂದಾಗಿದೆ. 1-ಪತಂಜಲಿ ಆಸ್ಪತ್ರೆ: ಇಲ್ಲಿ ಡಾಕ್ಟರ್ ಜೊತೆಯಾಗಿ ಪತಂಜಲಿ ಕ್ಲಿನಿಕ್ ನಡೆಸಲಿದೆ. 2-ಆರೋಗ್ಯ ಕೇಂದ್ರ: ಪತಂಜಲಿ ಆರೋಗ್ಯ ಕೇಂದ್ರ ಅಥವಾ ಕಲ್ಯಾಣ ಕೇಂದ್ರ. 3- ಸ್ವದೇಶಿ ಕೇಂದ್ರ: ಇದೊಂದು ನಾನ್ ಮೆಡಿಸಿನ್ ಔಟ್ಲೆಟ್ ಆಗಿರಲಿದೆ. ಇತ್ತೀಚೆಗೆ ದಿವ್ಯ ಜಲ ಎಂಬ ವಾಟರ್ ಬಿಡುಗಡೆ ಮಾಡಿರುವ ಪತಂಜಲಿ ಇದರ ಡ್ರಿಸ್ಟ್ರಿಬ್ಯೂಷನ್ಗೆ ವಿತರಕರನ್ನು ನೇಮಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.
ಪತಂಜಲಿ ಆಸ್ಪತ್ರೆಯ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಲು 8-12 ಲಕ್ಷ ರೂ. ಜೊತೆ 750 ರಿಂದ 1000 ಚದರ ಅಡಿಗಳಿರುವ ಅಂಗಡಿ ಹೊಂದಿರಬೇಕು. ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶದಲ್ಲಿ ಮಾತ್ರ ಈ ಆಸ್ಪತ್ರೆಯನ್ನು ತೆರೆಯಬಹುದಾಗಿದೆ. ಪತಂಜಲಿ ಆರೋಗ್ಯ ಕೇಂದ್ರ ಸ್ಥಾಪಿಸಲು 750 ರಿಂದ 1000 ಚದರ ಅಡಿಗಳಷ್ಟು ಸ್ಥಳವಕಾಶ ಹೊಂದಿರಬೇಕು. ಜೊತೆಗೆ 6 ರಿಂದ 7 ಲಕ್ಷ ರೂ ನೀಡಬೇಕಾಗುತ್ತದೆ. ಈ ಕೇಂದ್ರ ಸ್ಥಾಪಿಸಲು 1 ಲಕ್ಷಕ್ಕಿಂತ ಕಡಿಮೆ ಜನರಿದ್ದರೂ ತೊಂದರೆಯಿಲ್ಲ. ಅದೇ ರೀತಿ ಇದರ ಸಣ್ಣ ಮಳಿಗೆಯನ್ನು 50 ಸಾವಿರದಿಂದ 1 ಲಕ್ಷದ ನಡುವೆ ಆರಂಭಿಸಬಹುದು.