ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಅಮೇಜಾನ್.ಕಾಮ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಆನ್ಲೈನ್ ವ್ಯವಹಾರಗಳ ಮೂಲಕ ವಿಶ್ವ ನಂಬರ್ ಒನ್ ಶ್ರೀಮಂತ ಸ್ಥಾನಕ್ಕೇರಿದ ಜೆಫ್ ಬೆಜೊಸ್ ಇದರ ಮಾಲೀಕ. ಶ್ರೀಮಂತಿಕೆಗೆ ಸಾಟಿಯಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಮೈಕ್ರೋಸಾಫ್ಟ್ ಕಂಪೆನಿಯ ಒಡೆಯ ಬಿಲ್ ಗೇಟ್ಸ್ರನ್ನು ಹಿಂದಿಕ್ಕಿ ಜೆಫ್ ಈಗ ಶ್ರೀಮಂತಿಕೆಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಸದ್ಯದ ಅಮೆಜಾನ್ ಷೇರು ಮಾರುಕಟ್ಟೆ ಬಂಡವಾಳ 797 ಮಿಲಿಯನ್ ಡಾಲರ್ ಮೀರಿ ನಿಂತಿದೆ. ಆದರೆ ಇದೇ ಜೆಫ್ ಬೆಜೊಸ್ ಹಿಂದೊಮ್ಮೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡಿದ್ದರು ಎಂದರೆ ನಾವು ನಂಬಲೇಬೇಕು.
ಎಲ್ಲರೂ ಆಟವಾಡುವ ಹರೆಯದಲ್ಲಿ ಜೆಫ್ ಕೆಲಸಕ್ಕೆ ಸೇರಿದ್ದರು. ತನ್ನ 16ನೇ ವಯಸ್ಸಿನಲ್ಲಿ ಮೆಕ್ ಡೊನಾಲ್ಡ್ಸ್ನಲ್ಲಿ ಕೆಲಸಗಿಟ್ಟಿಸಿದ ಜೆಫ್ ಬೆಜೊಸ್, ಅಲ್ಲಿ ನೆಲದ ಮೇಲೆ ಚೆಲ್ಲಲಾಗುತ್ತಿದ್ದ ಕ್ಯಾಚೆಪ್ಗಳನ್ನು ಕ್ಲೀನ್ ಮಾಡುವ ಕ್ಲೀನರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅಂತಹದೊಂದು ಕೆಲಸ ಮಾಡಲು ನಿಜಕ್ಕೂ ಜೆಫ್ಗೆ ಇಷ್ಟವಿರಲಿಲ್ಲ. ಆದರೆ ಕುಟುಂಬ ಪರಿಸ್ಥಿತಿ ಹಾಗೇ ಇತ್ತು. ಬಾಲ್ಯದಲ್ಲಿ ತಾತನೊಂದಿಗೆ ವಾಸಿಸುತ್ತಿದ್ದ ಅವರು ವಿದ್ಯಾಭ್ಯಾಸದೊಂದಿಗೆ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಅದರಲ್ಲೂ ರಜಾದಿನಗಳು ಬಂತೆಂದರೆ ಮೆಕ್ ಡೊನಾಲ್ಡ್ಸ್ನಲ್ಲಿ ಜೆಫ್ ಪೂರ್ಣ ಪ್ರಮಾಣದ ಕೆಲಸಗಾರ.
ಅದಾಗಲೇ ಬಿಸಿನೆಸ್ನ ಹಾಗು ಹೋಗುಗಳ ಬಗ್ಗೆ ತಿಳಿದಿದ್ದ ಜೆಫ್ ನಂತರ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದರು. ಅಲ್ಲದೆ ಬ್ಯಾಂಕರ್ಸ್ ಟ್ರಸ್ಟ್ ಎಂಬ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ ಅವರು ತನ್ನ ಕೆಲಸದಲ್ಲೇ ಅನೇಕ ಹೊಸ ಅನುಭವಗಳನ್ನು ಪಡೆದುಕೊಂಡರು. ಕಲಿಕೆಯ ತುಡಿತದಲ್ಲಿರುವಾಗಲೇ ಜೆಫ್ಗೆ ಅದೊಂದು ದಿನ ಕಂಪೆನಿಯ ವತಿಯಿಂದ ಅಮೆರಿಕಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಅಲ್ಲಿ ಅನೇಕ ಜನರನ್ನು ಭೇಟಿಯಾಗಿದ್ದ ಜೆಫ್ ವಿಶ್ವದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ನಗರದ ಜನರು ಶಾಪಿಂಗ್ ವೇಳೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಅವರು ಕೇಳಿಸಿಕೊಂಡಿದ್ದರು. ಆ ವಿಷಯಗಳನ್ನೆಲ್ಲಾ ಜೆಫ್ ಮನಸ್ಸಲ್ಲಿ ಅಚ್ಚಾಕಿಸಿಕೊಂಡಿದ್ದರು. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಅವರು ಯೋಚಿಸಿದರು. ಇದೇ ವೇಳೆ ಇಂಟರ್ನೆಟ್ ಬಳಕೆದಾರರು ಕೂಡ ಹೆಚ್ಚಾಗುತ್ತಿತ್ತು. ಇದರಿಂದ ಭವಿಷ್ಯವು ಇಂಟರ್ನೆಟ್ನ್ನು ಅವಲಂಭಿಸಿರಲಿದೆ. ಇದಕ್ಕಾಗಿ ಇ-ಮಾರ್ಕೆಟಿಂಗ್ ಕಂಪೆನಿಯ ಅವಶ್ಯಕತೆಯಿದೆ ಎಂಬುದನ್ನು ಅವರು ಮನಗಂಡರು.
ಜೆಫ್ ತನ್ನ ಕೆಲಸವನ್ನು ಬಿಟ್ಟು ಕಂಪೆನಿಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಅದರಂತೆ ತನ್ನ ಪೋಷಕರ ಸ್ನೇಹಿತರ ಗ್ಯಾರೇಜನ್ನು ಪಡೆದರು. ಅಲ್ಲಿಯೇ ಹೊಸ ಉದ್ಯಮಕ್ಕೆ ನಾಂದಿಯಾಡಿದರು. ತಾನು ದುಡಿದಿದ್ದ ಎಲ್ಲ ಹಣವನ್ನು ಹೊಸ ಪರೀಕ್ಷೆಗೆ ಹೂಡಿದರು. ಕೆಲವರು ಜೆಫ್ಗೆ ಬುದ್ಧಿವಾದ ಹೇಳುತ್ತಿದ್ದರು. ಇದ್ಯಾವುದೂ ಕೇಳುವ ಸ್ಥಿತಿಯಲ್ಲಿ ಅಂದು ಜೆಫ್ ಇರಲಿಲ್ಲ. ಏಕೆಂದರೆ ಅವರು ಅದಾಗಲೇ ದೃಢ ನಿರ್ಧಾರ ಮಾಡಿದ್ದರು.
ಆದರೆ ತಾನು ಬಯಸಿದಂತೆ ಕಂಪೆನಿಯನ್ನು ಪ್ರಾರಂಭಿಸಲು ಜೆಫ್ಗೆ ಆರಂಭದಲ್ಲಿ ಸಾಧ್ಯವಾಗಿರಲಿಲ್ಲ. ಬಂಡವಾಳ ಹೂಡಲು ಹಣದ ಕೊರತೆಯುಂಟಾಯಿತು. ಈ ಸಂದರ್ಭದಲ್ಲಿ ತಾಯಿಯ ತಂದೆಯನ್ನು ಭೇಟಿಯಾಗಿ ಮನವೊಲಿಸಿದರು. ಆದರೆ ಲಕ್ಷಾಂತರ ಡಾಲರ್ ನೀಡಲು ಅವರೂ ಕೂಡ ಹಿಂದೆ ಮುಂದೆ ನೋಡಿದರು. ಕೊನೆಗೂ ಮನವೊಲಿಸಲು ಯಶಸ್ವಿಯಾದ ಜೆಫ್ ಬೆಜೊಸ್ ಒಂದಷ್ಟು ಹಣವನ್ನು ಒಟ್ಟುಗೂಡಿಸಲು ಯಶಸ್ವಿಯಾದರು.
ಅಮೆಜಾನ್ ಕಂಪೆನಿಯನ್ನು ಆರಂಭಿಸಲಾಯಿತು. ಕೇವಲ 2 ಎರಡು ವಾರಗಳು ಕಳೆಯುವಷ್ಟರಲ್ಲಿ ಕಂಪೆನಿಯು 20 ಸಾವಿರ ಡಾಲರ್ ಸಂಪಾದಿಸಿತು. ಇದೇ ಸಂದರ್ಭದಲ್ಲಿ 21 ನೇ ಶತಮಾನದಲ್ಲಿ ಪ್ರಬಲವಾಗಿದ್ದ ಡಾಟ್ಕಾಂ ಎಂಬ ಆನ್ಲೈನ್ ಕಂಪೆನಿಯು ನಷ್ಟದತ್ತ ಮುಖಮಾಡಿತು. ಇದನ್ನೂ ಕೂಡ ಬಂಡವಾಳ ಮಾಡಿಕೊಂಡ ಜೆಫ್ ಬೆಜೊಸ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದರು. ಹಾಗೆಯೇ ಡೈಪರ್ಸ್.ಕಾಮ್ ಎಂಬ ಕಂಪೆನಿ ಮಕ್ಕಳ ಉತ್ಪನ್ನಗಳ ಮೂಲಕ ಫೇಮಸ್ ಆಗಿತ್ತು. ಆ ಕಂಪೆನಿಯನ್ನೂ ಟಾರ್ಗೆಟ್ ಮಾಡಿದ್ದ ಜೆಫ್, ತನ್ನ ಉತ್ಪನ್ನಗಳನ್ನು 30% ಕಡಿಮೆಗೆ ನೀಡಿದರು. ಅಲ್ಲದೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಎಲ್ಲರನ್ನು ಅಮೆಜಾನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ಇದರ ಫಲವಾಗಿ 2001 ರ ಬಳಿಕ ಅಮೆಜಾನ್ ಎಂಬುದು ಬೃಹತ್ ಕಂಪೆನಿಯಾಗಿ ಬೆಳೆಯಿತು. ಕಂಪೆನಿಯು ಅನೇಕ ನಗರದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿತು. ನಗರಗಳನ್ನು ದಾಟಿ ದೇಶಗಳತ್ತ ಅಮೆಜಾನ್ ಮುಖ ಮಾಡಿತು. ಇಂದು ಸಾಟಿಯಿಲ್ಲದ ಇ-ಕಾಮರ್ಸ್ ಸಂಸ್ಥೆಯಾಗಿ ಅಮೆಜಾನ್.ಕಾಮ್ ಬೆಳೆದು ನಿಂತಿದೆ. ಅಂದು ಮೆಕ್ ಡೊನಾಲ್ಡ್ಸ್ ಕಂಪೆನಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಹುಡುಗ ಇಂದು ಕಂಪೆನಿಯನ್ನು ಖರೀದಿಸಬಲ್ಲ ಧನಿಕನಾಗಿ ಬೆಳೆದಿದ್ದಾರೆ. ಅದರೊಂದಿಗೆ ಇಡೀ ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಇಂದು ಗುರುತಿಸಿಕೊಂಡಿದ್ದಾರೆ.