ಭಾರತ ದೇಶದಲ್ಲಿ ಮಾನವ ಕಳ್ಳಸಾಗಣೆಗೆ ಗುರಿಯಾಗುತ್ತಿರುವ ಮೊದಲ ಐದು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ರಾಜ್ಯ ಅಗ್ರಸ್ಥಾನದಲ್ಲಿದೆ. ವೇಶ್ಯಾವಾಟಿಕೆಗೆ ಬಲಿಯಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳ ಪೈಕಿ ಹೆಚ್ಚಿನವರು ಚಹಾ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಅನ್ನೋದು ಕಟುಸತ್ಯ. ಬಂಗಾಳದಲ್ಲಿ ನೂರಾರು ಎಕರೆ ಚಹಾ ತೋಟ ಹೊಂದಿದವರು ಇದ್ದಾರೆ. ಇಂತಹ ತೋಟಗಳಿಗೆ ಕೆಲಸ ಮಾಡಲು ಬರುವ ಬಡತನದ ಹಿನ್ನೆಲೆಯ ಕಾರ್ಮಿಕರನ್ನೇ ಸುಲಭವಾಗಿ ಈ ದಂಧೆಗೆ ದೂಡಲಾಗುತ್ತಿದೆ. ಇದರ ಹಿನ್ನೆಲೆ ಅರಿತ ಸಾಮಾಜಿಕ ಕಾರ್ಯಕರ್ತೆ ಶುಕ್ಲಾ ದೇಬನಾಥ್ ಆ ಮಹಿಳೆಯರ ರಕ್ಷಣೆಗೆಂದೇ ಬಂದು ಅವರ ಜೀವನದಲಿ ಹೊಸ ಬೆಳಕನ್ನು ಚೆಲ್ಲಿದ್ದಾರೆ.
ಅಲಿಪುರ್ದೂರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತೆ ಶುಕ್ಲಾ ದೇಬನಾಥ್ ಅವರು ಮಾನವ ಕಳ್ಳ ಸಾಗಾಣೆಗೆ ಬಲಿಯಾಗುತ್ತಿರುವ ಚಹಾ ತೋಟಗಳಲ್ಲಿ ಕೆಲಸ ಮಾಡುವ ಯುವತಿಯರನ್ನೇ ಗುರಿಯಾಗಿಸಿ ಅವರಿಗೆ ಕಳೆದ ಕೆಲ ವರ್ಷಗಳಿಂದ ಬ್ಯೂಟಿಷಿಯನ್ ತರಬೇತಿ ನೀಡುತ್ತಿದ್ದಾರೆ. ತಮ್ಮ ಆದಾಯದ ಒಂದು ಭಾಗವನ್ನು ಇದಕ್ಕಾಗಿ ವ್ಯಯಿಸುವ ಶುಕ್ಲಾ ದೇಬನಾಥ್, ಮಹಿಳೆಯರು ಮತ್ತು ಹುಡುಗಿಯರು ಕಳ್ಳಸಾಗಣೆಗೆ ಎಷ್ಟು ಸುಲಭವಾಗಿ ಬಲಿಯಾಗುತ್ತಾರೆ ಎಂದು ಕಣ್ಣಾರೆ ಕಂಡಿದ್ದಾರೆ. ಹೀಗಾಗಿ ಅವರ ರಕ್ಷಣೆಗೆ ಪಣತೊಟ್ಟು ಬ್ಯೂಟಿಷಿಯನ್ ತರಬೇತಿ ನೀಡೋದರಿಂದ ಅವರು ತಮ್ಮ ಮನೆಯಲ್ಲಿಯೇ ಸ್ವ ಉದ್ಯೋಗ ಮಾಡಲು ಸಾಧ್ಯವಿದೆ ಎಂದು ಅವರು ಹೇಳುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ ಕೂಡ.
ಸ್ನಾತಕೋತ್ತರ ಪದವೀಧರೆ ಮತ್ತು ಬ್ಯೂಟಿಷಿಯನ್ ತರಬೇತಿದಾರರೂ ಆಗಿರುವ ಶುಕ್ಲಾ, ತಮ್ಮ ಕೌಶಲ್ಯವನ್ನು ಬಳಸಿಕೊಂಡು ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯರಿಗಾಗಿ ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿರಿಸಿ ಅವರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಈ ಹುಡುಗಿಯರು ಬ್ಯೂಟಿಷಿಯನ್ ಆಗಿ ಸ್ವಂತ ದುಡಿಮೆ ಆರಂಭಿಸಿದರೆ ಅವರು ಹೊರಗೆ ಹೋಗಬೇಕಾದ ಅಗತ್ಯವಿಲ್ಲ ಎಂಬುದನ್ನು ನಾನು ಕಂಡುಕೊಂಡೆ ಎಂದು ಶುಕ್ಲಾ ಹೇಳುತ್ತಾರೆ.
ಬ್ಯೂಟಿಷಿಯನ್ ತರಬೇತಿ ಪಡೆದ ಹುಡುಗಿಯರು ಹಳ್ಳಿಯಿಂದ ಹೊರಹೋಗದೆ ವಧುವಿನ ಮೇಕಪ್ ಮತ್ತು ಇತರ ಸೌಂದರ್ಯ ಸಂಬಂಧಿತ ಕೆಲಸಗಳನ್ನು ಮಾಡುವುದರಿಂದ ತಿಂಗಳಿಗೆ ಸುಮಾರು 7000-8000 ರೂ ಗಳಿಸಬಹುದು. ಇದು ಹುಡುಗಿಯರು ಚಹಾ ತೋಟಗಳಲ್ಲಿ ಕೆಲಸ ಮಾಡುವ ಒಂದು ತಿಂಗಳಲ್ಲಿ ಗಳಿಸುವ ದುಡಿಮೆಗಿಂತ ಹೆಚ್ಚು. ಅವರು ಸ್ವಂತ ದುಡಿಮೆ ಮಾಡೋದರಿಂದ ಮಾನವ ದಂಧೆಯಿಂದಲೂ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಶುಕ್ಲಾ ಹೇಳುತ್ತಾರೆ.
ಈವರೆಗೆ ಸುಮಾರು 5000ಕ್ಕೂ ಹೆಚ್ಚು ಹುಡುಗಿಯರಿಗೆ ಬ್ಯೂಟಿಷಿಯನ್ ತರಬೇತಿ ನೀಡಿರುವ ಶುಕ್ಲಾ ದೇಬನಾಥ್, ‘ನಾನು ಒಂದು ಚಹಾ ತೋಟದಿಂದ ಇನ್ನೊಂದಕ್ಕೆ ಹೋಗಿ ಆ ಹುಡುಗಿಯರ ಪೋಷಕರನ್ನು ಭೇಟಿ ಮಾಡಿ ಬ್ಯೂಟಿಷಿಯನ್ ತರಬೇತಿ ಪಡೆಯಲು ಅವರಿಗೆ ಮನವರಿಕೆ ಮಾಡುತ್ತೇನೆ. ಆರಂಭದಲ್ಲಿ, ಅವರಲ್ಲಿ ಅನೇಕರಿಗೆ ಅದರ ಸಾಮರ್ಥ್ಯದ ಬಗ್ಗೆ ತಿಳಿದಿರದ ಕಾರಣ ಅವರಿಗೆ ಮನವರಿಕೆ ಮಾಡುವುದು ಸವಾಲಾಗಿತ್ತು. ಆದರೆ ಬಳಿಕ ಜೀವನೋಪಾಯಕ್ಕಾಗಿ ಸೌಂದರ್ಯವರ್ಧಕರಾಗಿ ತರಬೇತಿ ಪಡೆದ ನಂತರ ಹೆಚ್ಚು ಹೆಚ್ಚು ಜನರು ಮುಂದೆ ಬರಲು ಪ್ರಾರಂಭಿಸಿದರು’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಚಹಾ ತೋಟಗಳಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಿತಿಮೀರಿದ್ದು, ಇದರಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಬ್ಯೂಟಿಷಿಯನ್ ತರಬೇತಿಯ ಜೊತೆಗೆ ಹುಡುಗಿಯರಿಗೆ ಉಚಿತ ಕರಾಟೆ ತರಬೇತಿಯನ್ನೂ ನೀಡುತ್ತಾರೆ. ಆತ್ಮರಕ್ಷಣೆಯ ತರಬೇತಿಯನ್ನು ನೀಡಿದಾಗ ಯಾರಾದರೂ ತಮ್ಮ ಮೇಲೆ ದೌರ್ಜನ್ಯ ಎಸಗಲು ಬಂದಾಗ ಅವರನ್ನು ಎದುರಿಸಲು ಆತ್ಮವಿಶ್ವಾಸ ಹೊಂದುತ್ತಾರೆ ಅನ್ನೋದು ಶುಕ್ಲಾ ಅಭಿಮತ.
ಸದ್ಯ ತನ್ನ ತಾಯಿಯ ಜೊತೆ ವಾಸಿಸುತ್ತಿರುವ ಶುಕ್ಲಾ, ಇತರ ಜನರಿಗೆ ಸಹಾಯ ಮಾಡಲು ನನ್ನ ತಂದೆಯೇ ನನಗೆ ಪ್ರೇರಣೆ ಎಂದು ದಿವಂಗತ ಅಪ್ಪನನ್ನು ನೆನಪಿಸಿಕೊಳ್ಳುತ್ತಾರೆ. ‘ನನ್ನ ತಂದೆ, ನನ್ನ ಬಾಲ್ಯದಿಂದಲೇ ಇತರರಿಗೆ ಸಹಾಯ ಮಾಡಲು ಕಲಿಸಿದರು, ಪರೀಕ್ಷೆಯಲ್ಲಿ ಮುಖ್ಯವಲ್ಲ, ನೀವು ಜೀವನದಲ್ಲಿ ಏನು ಗಳಿಸುತ್ತೀರಿ ಅನ್ನೋದು ಮುಖ್ಯ ಎಂದು ಅವರು ನನಗೆ ಹೇಳುತ್ತಿದ್ದರು. ನಾವು ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಅವರ ಮುಖದಲ್ಲಿ ಬರುವ ನಗು ನಮ್ಮನ್ನು ಎಂದಿಗೂ ಜೀವಂತವಾಗಿಡುತ್ತದೆ ಎಂದು ಅಪ್ಪ ಹೇಳುತ್ತಿದ್ದರು ಎಂದು ಶುಕ್ಲಾ ಹೆಮ್ಮೆಯಿಂದ ಹೇಳುತ್ತಾರೆ.