ಹೌದು.. ಸಾಮಾನ್ಯವಾಗಿ 45 ವಯಸ್ಸಿನ ನಂತರ ಮಹಿಳೆಯರಿಗೆ ಮುಟ್ಟಾಗುವ ಕ್ರಿಯೆ ನಿಲ್ಲುತ್ತದೆ. ಆದರೆ ಕೇರಳದ ಈ ತಾಯಿಯೊಬ್ಬರು ತಮ್ಮ 47ನೇ ವಯಸ್ಸಿನಲ್ಲಿ ಪುಟ್ಟ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹಿರಿ ಮಗಳು ತನಗೆ ತಂಗಿ ಬರ್ತಿದ್ದಾಳೆ ಅಂತಾ ಸಂಭ್ರಮಿಸಿದ್ದಾರೆ. ಮೋಹಿನಿಯಾಟ್ಟಂ ಕಲಾವಿದೆ, ಗಾಯಕಿ, ನಟಿಯೂ ಆಗಿರುವ ಆರ್ಯ ಪಾರ್ವತಿ ಎಂಬ ಕೇರಳ ಮೂಲದ ಯುವತಿ ಇನ್ಸ್‌ಟಾಗ್ರಾಂನಲ್ಲಿ ಅಮ್ಮ ಪ್ರೆಗ್ನೆಂಟ್ ಅನ್ನೋ ವಿಷಯ ತನಗೆ ತಿಳಿದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಸಹಸ್ರಾರು ಪ್ರತಿಕ್ರಿಯೆಗಳು ಬಂದಿವೆ.
ಆರ್ಯ ಪಾರ್ವತಿ ಬರೆದ ಪೋಸ್ಟ್‌ನಲ್ಲಿ ಹೀಗಿದೆ: ‘ಒಂದು ಪೋನ್ ಕರೆ ನನ್ನ ಜೀವನವನ್ನೇ ಬದಲಿಸಿತು. ಕಳೆದ ವರ್ಷ ನಾನು ರಜೆ ಪಡೆದು ಹಾಸ್ಟೆಲ್‌ನಿಂದ ಮನೆಗೆ ವಾಪಸ್ ಆಗೋ 4 ದಿನದ ಮೊದಲು ಅಪ್ಪ ನನಗೆ ಫೋನ್ ಮಾಡಿದ್ರು. ಆರಂಭದಲ್ಲಿ ಹೇಗೆ ಹೇಳೋದು ಅಂತಾ ತೋಚದೆ ಅಪ್ಪ ತೊದಲಿದರು. ನಂತರ ‘ನೀನು ಅಕ್ಕನಾಗುತ್ತಿದ್ದೀಯಾ’ ಅಂದ್ರು. ಆ ಕ್ಷಣ ನನಗೆ ಶಾಕ್ ಅನ್ನಿಸಿತು’ ಎಂದು ಹೇಳಿದ್ದಾರೆ.
ಮುಂದುವರಿದು ಬರೆದಿರುವ ಆರ್ಯಪಾರ್ವತಿ, ‘ಅಮ್ಮ ಪ್ರೆಗ್ನೆಂಟ್ ಅಂತಾ ಅಪ್ಪ ಅಂದಾಗ ನನಗೆ ಶಾಕ್ ಮಾತ್ರವಲ್ಲ, ಇದು ಹೇಗೆ ಸಾಧ್ಯ ಅಂತಾನೂ ಅನ್ನಿಸಿತು. ಯಾಕೆಂದರೆ ಅಮ್ಮನಿಗೆ ಈಗ 47 ವರ್ಷ. ಈ ಸುದ್ದಿ ನನಗೆ ಅನಿರೀಕ್ಷಿತವಾಗಿತ್ತು. ಯಾಕೆಂದರೆ ಮಕ್ಕಳಿಗೆ 23 ವರ್ಷ ಇರೋವಾಗ ನಮ್ಮ ಹೆತ್ತವರು ಹೀಗೆ ಹೇಳಿದರೆ ನಮಗದು ವಿಚಿತ್ರ ಅನ್ಸುತ್ತೆ. ಅಪ್ಪ ನನಗೆ ಈ ವಿಷಯ ತಿಳಿಸೋವಾಗ ಅಮ್ಮನಿಗೆ ಆಗಲೇ 7 ತಿಂಗಳು ಪೂರ್ಣಗೊಂಡಿತ್ತು.’
ಅಲ್ಲದೇ, ‘ನಂತರ ನಾನು ಕಾಲೇಜು ಓದಿಗಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅಮ್ಮ ತಾಯಿಯಾಗ್ತಿರೋ ವಿಷಯ ಹೇಳಿದ್ರೆ ನಾನು ಹೇಗೆ ರಿಯಾಕ್ಟ್ ಮಾಡ್ತೀನೋ ಅಂತಾ ತಿಳಿಯದೆ ಗೊಂದಲದಲ್ಲಿ ನನಗೆ ವಿಷಯ ಹೇಳದೆ ಮುಚ್ಚಿಟ್ಟರು. ಆಮೇಲೆ ನಾನು ರಜೆಯಲ್ಲಿ ಮನೆಗೆ ಹೋದಾಗ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಅತ್ತು ಬಿಟ್ಟೆ. ‘ನಾನು ಯಾಕಮ್ಮಾ ನಾಚಿಕೆ ಪಡಲಿ, ನಾನು ಕೂಡ ಅನೇಕ ವರ್ಷಗಳಿಂದ ಇದನ್ನೇ ಬಯಸುತ್ತಿದ್ದೆ’ ಎಂದು ಹೇಳಿದಾಗ ಅಮ್ಮನೂ ಅತ್ತುಬಿಟ್ಟರು ಎಂದು ಪಾರ್ವತಿ ಹೇಳಿದ್ದಾರೆ.
‘ನಂತರ ನಾನು ಅಮ್ಮನ ಜೊತೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದೆ. ಆಗ ಅಮ್ಮ ನನ್ನಲ್ಲಿ ಈ ವಿಷಯ ಹೇಳಿದ್ರು. ಒಂದಿನ ಅಪ್ಪ ಮತ್ತು ಅಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಆಗ ಅಮ್ಮ ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದರು. ವೈದ್ಯರಲ್ಲಿಗೆ ಹೋದಾಗ ಅವರು ಪ್ರೆಗ್ನೆಂಟ್ ಎಂದು ಹೇಳಿದ್ರು. ಕೆಲ ಕಾರಣಗಳಿಗಾಗಿ ಅಮ್ಮನ ಹೊಟ್ಟೆ ಉಬ್ಬಿರಲಿಲ್ಲ. ಹೀಗಾಗಿ ಅಮ್ಮ ವಯಸ್ಸಿನ ಕಾರಣಕ್ಕೆ ಮುಟ್ಟು ನಿಂತಿದೆ ಅಂದುಕೊಂಡಿದ್ದರು. ವೈದ್ಯರು ಕೂಡ ಕೆಲ ವರ್ಷಗಳ ಹಿಂದೆಯೇ ಅಮ್ಮ ಮತ್ತೆ ಗರ್ಭಿಣಿ ಆಗಲು ಸಾಧ್ಯವಿಲ್ಲ ಅಂದಿದ್ದು ಅಮ್ಮನ ತಲೆಯಲ್ಲಿ ಗಟ್ಟಿಯಾಗಿ ಕೂತಿತ್ತು ಎಂದು ಆರ್ಯ ಪಾರ್ವತಿ ಬರೆದುಕೊಂಡಿದ್ದಾರೆ.
ಅಮ್ಮ ಗರ್ಭಿಣಿಯಾಗಿರೋದನ್ನು ನಿಧಾನವಾಗಿ ನಮ್ಮ ಸಂಬಂಧಿಕರಿಗೆ ಹೇಳಲು ಪ್ರಾರಭಿಸಿದೆವು. ಆಗ ಕೆಲವರು ಕಾಳಜಿ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಗೇಲಿ ಮಾಡಿದರು ಎಂದಿರುವ ಆರ್ಯಪಾರ್ವತಿ, ಇದ್ಯಾವದಕ್ಕೂ ನಾವು ತಲೆಕೆಡಿಸಿಕೊಳ್ಳಲಿಲ್ಲ, ಬದಲಾಗಿ ಅಮ್ಮನ ಆರೋಗ್ಯದ ಕರೆಗೆ ಗಮನ ವಹಿಸಿದ್ವಿ. ಹೀಗಾಗಿ ಕಳೆದ ವಾರ ಅಮ್ಮ ಯಾವುದೇ ಸಮಸ್ಯೆ ಇಲ್ಲದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ನಾನು ಅಕ್ಕನಾಗಿದ್ದೇನೆ. ಅವಳು ನನ್ನನ್ನು ಅಕ್ಕ ಎಂದು ಕರೆಯುವವರೆಗೆ ಕಾಯಲು ನನ್ನಿಂದ ಸಾಧ್ಯವಿಲ್ಲ. ಜನ ಮಾತಾಡಿಕೊಳ್ತಾರೆ, ಅದು ನನಗೆ ಮುಖ್ಯವಲ್ಲ. ಈಗ ನನ್ನ ತಂಗಿ ಬಂದ ನಂತರ ನಮ್ಮ ಕುಟುಂಬದಲ್ಲಿ ಸಂತಸ ಇಮ್ಮಡಿಯಾಗಿದೆ ಎಂದು ಆರ್ಯ ಪಾರ್ವತಿ ಖುಷಿಯಿಂದ ಹೇಳಿಕೊಂಡಿದ್ದಾರೆ.